ಸೋಮವಾರಪೇಟೆ, ಜು. ೨೦: ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಿರುವ ಅಂಗಡಿ ಮಳಿಗೆಗಳನ್ನು ಬಾಡಿಗೆ ಪಡೆದ ಬಹುತೇಕ ಮಂದಿ ನಿಗದಿತ ಸಮಯದಲ್ಲಿ ಬಾಡಿಗೆ ಪಾವತಿಸದ ಹಿನ್ನೆಲೆ ಪ.ಪಂ. ಆದಾಯಕ್ಕೆ ತಡೆಬಿದ್ದಿದ್ದು, ಇಂತಹ ಅಂಗಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಇಲ್ಲಿನ ಪ.ಪಂ. ಸಭಾಂಗಣದಲ್ಲಿ ಪಂಚಾಯಿತಿಯ ಪ್ರಭಾರ ಅಧ್ಯಕ್ಷ ಬಿ. ಸಂಜೀವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಯಿತು.

ಅಂಗಡಿ ಮಳಿಗೆಗಳನ್ನು ಬಾಡಿಗೆ ಪಡೆದವರು ನಿಗದಿತ ಸಮಯದಲ್ಲಿ ಬಾಡಿಗೆ ಕಟ್ಟುತ್ತಿಲ್ಲ. ಕೆಲವರು ವರ್ಷಾನುಗಟ್ಟಲೆ ಬಾಡಿಗೆ ಕಟ್ಟದೇ ಮಳಿಗೆಗಳಲ್ಲಿ ವ್ಯವಹಾರ ನಡೆಸುತ್ತಿ ದ್ದಾರೆ. ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿರುವ ಒಂದು ಮಳಿಗೆಯಿಂದಲೇ ಪಂಚಾಯಿತಿಗೆ ೨.೩೦ಲಕ್ಷ ಬಾಡಿಗೆ ಹಣ ಬರಬೇಕಿದೆ. ಬಾಡಿಗೆ ಹಣ ಕೇಳಲು ಹೋದರೆ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಸಿಬ್ಬಂದಿಗಳು ಸಭೆಯಲ್ಲಿ ಅಳಲು ತೋಡಿಕೊಂಡರು.

ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು, ೬ ತಿಂಗಳ ಕಾಲ ಬಾಡಿಗೆ ಕಟ್ಟದಿದ್ದರೆ ಅಂತಹ ಮಳಿಗೆಯ ಕರಾರು ಪತ್ರವನ್ನು ರದ್ದುಪಡಿಸಿ, ಪಂಚಾಯಿತಿ ವಶಕ್ಕೆ ಪಡೆಯಲು ಅವಕಾಶವಿದೆ. ಮಳಿಗೆ ನೀಡಿದ ಸಂದರ್ಭವೇ ಈ ಬಗ್ಗೆ ಷರತ್ತಿನಲ್ಲಿ ತಿಳಿಸಲಾಗಿದೆ. ಆದಾಗ್ಯೂ ೨.೩೦ ಲಕ್ಷದಷ್ಟು ಬಾಡಿಗೆ ಉಳಿಸಿಕೊಂಡಿರು ವುದು ಖಂಡನೀಯ ಎಂದು ಸದಸ್ಯರು ಗಳು ಅಸಮಾಧಾನ ವ್ಯಕ್ತಪಡಿಸಿದರು.

ಬಾಡಿಗೆ ಉಳಿಸಿಕೊಂಡಿರುವ ಅಂಗಡಿ ಮಾಲೀಕರಿಗೆ ತಕ್ಷಣ ನೋಟೀಸ್ ನೀಡಿ ಬಾಡಿಗೆ ವಸೂಲಾತಿ ಮಾಡಬೇಕು. ತಪ್ಪಿದಲ್ಲಿ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಂಗಡಿ ಮಳಿಗೆಗಳನ್ನು ಹರಾಜಿನ ಮೂಲಕ ಪಡೆದವರು ನಂತರ ಒಳ ಒಪ್ಪಂದ ಮಾಡಿಕೊಂಡು ದಿನವೊಂದಕ್ಕೆ ೩೦೦ ರೂಪಾಯಿಯಂತೆ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ. ಈ ಬಗ್ಗೆಯೂ ಗಮನಹರಿಸಬೇಕೆಂದು ಸದಸ್ಯರು ಅಭಿಪ್ರಾಯಿಸಿದರು.

ಬಸ್‌ನಿಲ್ದಾಣ ಜಟಾಪಟಿ: ಇಲ್ಲಿನ ಕಕ್ಕೆಹೊಳೆ ಜಂಕ್ಷನ್ ಸಮೀಪ ಬಿಜೆಪಿ ಕಾರ್ಯಕರ್ತರು ಸ್ವ ಇಚ್ಚೆಯಿಂದ ನಿರ್ಮಿಸುತ್ತಿರುವ ಸಾರ್ವಜನಿಕ ಬಸ್ ನಿಲ್ದಾಣದ ವಿಷಯದಲ್ಲಿ ಪಂಚಾಯಿತಿ ಸದಸ್ಯರ ನಡುವೆ

(ಮೊದಲ ಪುಟದಿಂದ) ಜಟಾಪಟಿ ನಡೆಯಿತು. ಈ ಹಿಂದೆ ಇಂದಿರಾಗಾAಧಿ ಅಭಿಮಾನಿ ಸಂಘದವರು ಬಸ್ ನಿಲ್ದಾಣ ನಿರ್ಮಿಸಿದ್ದರು. ಇದೀಗ ಶಾಸಕರ ಹೆಸರಿನಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಬಿಜೆಪಿ ಕಾರ್ಯಕರ್ತರು ಮುಂದಾಗಿದ್ದಾರೆ. ಇದಕ್ಕೆ ಇಂದಿರಾ ಗಾಂಧಿ ಅಭಿಮಾನಿಗಳ ಸಂಘದವರು ತಕರಾರು ತೆಗೆದಿದ್ದಾರೆ. ನಿಲ್ದಾಣ ನಿರ್ಮಿಸಲು ತರಾತುರಿಯಲ್ಲಿ ಅನುಮತಿ ನೀಡಿದ್ದು ಯಾಕೆ? ಮೂಲ ನಿರ್ಮಾಣದ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸಬೇಕು. ಬಸ್ ನಿಲ್ದಾಣಕ್ಕೆ ಇಂದಿರಾ ಗಾಂಧಿ ಹೆಸರಿಡಬೇಕೆಂದು ಸದಸ್ಯೆ ಶೀಲಾ ಡಿಸೋಜ ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಬಿ.ಆರ್. ಮಹೇಶ್, ಕಳೆದ ೨೦ ವರ್ಷಗಳಿಂದ ಮೂಲೆಗುಂಪಾಗಿ, ಶಿಥಿಲಾವಸ್ಥೆಯಲ್ಲಿದ್ದ ಬಸ್ ನಿಲ್ದಾಣ ಬೀಳುವ ಹಂತದಲ್ಲಿತ್ತು. ಇದರ ಒಳಗೆ ಪ್ರಯಾಣಿಕರು ಕೂರುವ ಸ್ಥಿತಿಯೂ ಇರಲಿಲ್ಲ. ಬೀಳುವ ಹಂತದಲ್ಲಿದ್ದ ಸಂದರ್ಭ ಯಾರೂ ಈ ಬಗ್ಗೆ ಗಮನಹರಿಸಿಲ್ಲ. ಇದೀಗ ಹೊಸ ನಿಲ್ದಾಣ ನಿರ್ಮಿಸುವ ಸಂದರ್ಭ ಇಂತಹ ತಕರಾರು ಸರಿಯಲ್ಲ ಎಂದರು.

ಪಟ್ಟಣದಲ್ಲಿ ಏನಾದರೂ ಅಭಿವೃದ್ಧಿ ಕಾರ್ಯ ಕೈಗೊಂಡರೆ ಕೆಲವರು ತಗಾದೆ ತೆಗೆಯಲು ಕಾಯುತ್ತಿರುತ್ತಾರೆ. ಕಕ್ಕೆಹೊಳೆಯಲ್ಲಿ ಬಸ್ ನಿಲ್ದಾಣ ಕೆಡವಿದ ಸಂದರ್ಭ ಕಲ್ಲು, ಸಿಮೆಂಟ್ ಶೀಟ್‌ಗಳನ್ನು ಇಂದಿರಾ ಗಾಂಧಿ ಅಭಿಮಾನಿಗಳ ಸಂಘದವರೇ ತೆಗೆದುಕೊಂಡು ಹೋಗಿದ್ದಾರೆ. ಆ ಸಂದರ್ಭ ಸುಮ್ಮನಿದ್ದ ಮಂದಿ ಇದೀಗ ತಗಾದೆ ತೆಗೆದಿರುವುದು ಸರಿಯಲ್ಲ. ಕಕ್ಕೆಹೊಳೆಯಲ್ಲಿ ನಿರ್ಮಾಣವಾಗು ತ್ತಿರುವುದು ಸಾರ್ವಜನಿಕ ಪ್ರಯಾಣಿಕರ ತಂಗುದಾಣ. ಇದಕ್ಕೆ ಯಾರ ಹೆಸರಿಡಬೇಕೆಂಬುದನ್ನು ನಂತರ ತೀರ್ಮಾನಿಸುವ ಎಂದು ಸದಸ್ಯರಾದ ಸೋಮೇಶ್, ಮಹೇಶ್, ಪಿ.ಕೆ. ಚಂದ್ರು ಅವರುಗಳು ಅಭಿಪ್ರಾಯಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ, ಜನೋಪಯೋಗಿ ಯೋಜನೆಗಳು ನಡೆಯುವ ಸಂದರ್ಭ ಸದಸ್ಯರುಗಳು ಒಮ್ಮತದ ತೀರ್ಮಾನ ತೆಗೆದುಕೊಳ್ಳಬೇಕು. ಅಡ್ಡಗಾಲು ಹಾಕಬಾರದು ಎಂದು ಅಧ್ಯಕ್ಷ ಸಂಜೀವ ಹೇಳಿದರು.

ಕೆನರಾ ಬ್ಯಾಂಕ್‌ನಲ್ಲಿ ಪ.ಪಂ. ನಿಂದ ೧.೪೨ ಕೋಟಿ ಹಣ ಠೇವಣಿ ಇಡಲಾಗಿದ್ದು, ಇದನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುವಂತೆ ಎಸ್. ಮಹೇಶ್ ಸಲಹೆ ನೀಡಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ಸ್ಪಷ್ಟನೆ ಬಯಸಿದ ಸಂದರ್ಭ ಆ ಹಣವನ್ನು ಬಳಸಿ ಕೊಳ್ಳಲು ಅವಕಾಶವಿಲ್ಲ. ಅದರಿಂದ ಬರುವ ಬಡ್ಡಿ ಹಣವನ್ನು ಬಳಸಿ ಕೊಳ್ಳಬಹುದು ಎಂದು ಡಿ.ಸಿ. ತಿಳಿಸಿರುವುದಾಗಿ ಅಭಿಯಂತರ ಹೇಮಂತ್‌ಕುಮಾರ್ ಸಭೆಯ ಗಮನಕ್ಕೆ ತಂದರು. ಹೆಚ್ಚು ಬಡ್ಡಿ ಬರುವ ಬ್ಯಾಂಕ್‌ಗೆ ಠೇವಣಿಯ ಹಣವನ್ನು ವರ್ಗಾಯಿಸಲು ಕ್ರಮ ವಹಿಸಬೇಕೆಂದು ಮಹೇಶ್ ಸಲಹೆ ನೀಡಿದರು. ಕೊರೊನಾ ಲಾಕ್‌ಡೌನ್ ಸಂದರ್ಭ ವ್ಯಾಪಾರವಿಲ್ಲದೆ ವರ್ತಕರು ತೊಂದರೆಗೆ ಸಿಲುಕಿದ್ದಾರೆ. ಈ ಹಿನ್ನೆಲೆ ೨ ತಿಂಗಳ ಬಾಡಿಗೆ ಹಣವನ್ನು ಕಡಿತಗೊಳಿಸಲು ಕೋರಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ.ಪಂ.ಗೆ ಅಗತ್ಯ ಸಿಬ್ಬಂದಿಗಳ ನಿಯೋಜನೆಗೆ ಕ್ರಮವಹಿಸುವಂತೆ ಸೋಮೇಶ್ ಸಲಹೆ ನೀಡಿದರು. ಆಸ್ಪತ್ರೆಯ ಮುಂಭಾಗ ಪ.ಪಂ.ಗೆ ಸಂಬAಧಿಸಿದ ೭ ಸೆಂಟ್ ನಿವೇಶನವಿದ್ದು, ಇದನ್ನು ತಕ್ಷಣ ಪಂಚಾಯಿತಿಯ ಸುಪರ್ದಿಗೆ ಪಡೆಯಬೇಕೆಂದು ಶುಭಾಕರ್ ಹೇಳಿದರು. ಬೀದಿ ದೀಪಗಳು, ಚರಂಡಿ ಸ್ವಚ್ಛತೆ, ಸ್ಲಾö್ಯಬ್ ಅಳವಡಿಕೆಗೆ ಕ್ರಮವಹಿಸುವಂತೆ ಸದಸ್ಯರು ಸೂಚಿಸಿದರು. ಸೋಮವಾರಪೇಟೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ.ಪಂ. ಕಟ್ಟಡದಲ್ಲಿ ಕಚೇರಿ ತೆರೆಯಲು ಅವಕಾಶ ನೀಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯರುಗಳಾದ ಜೀವನ್, ವೆಂಕಟೇಶ್, ರಾಣಿ, ನಾಮನಿರ್ದೇಶಿತ ಸದಸ್ಯ ಶರತ್‌ಚಂದ್ರ, ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.