ನಾಪೋಕ್ಲು, ಜು. ೨೦: ಸಮೀಪದ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ದೇವಾಲಯಕ್ಕೆ ತೆರಳುವ ರಸ್ತೆಯ ಒತ್ತಿನಲ್ಲಿದ್ದ ಭಾರೀ ಗಾತ್ರದ ಮರವೊಂದು ಗಾಳಿ ಮಳೆಗೆ ಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಪಕ್ಕದಲ್ಲೇ ಹಾದು ಹೋದ ವಿದ್ಯುತ್ ತಂತಿಗಳು ತುಂಡಾಗಿದ್ದವು. ಈ ವಿಷಯ ತಿಳಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಶೌರ್ಯ ವಿಪತ್ತು ಘಟಕದ ಪದಾಧಿಕಾರಿಗಳು ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಚೆಸ್ಕಾಂ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ತುಂಡಾಗಿದ್ದ ವಿದ್ಯುತ್ ತಂತಿಯನ್ನು ಸರಿಪಡಿಸಿದರು. ಧರ್ಮಸ್ಥಳ ಶೌರ್ಯ ವಿಪತ್ತು ಘಟಕದ ಪದಾಧಿಕಾರಿಗಳಾದ ಗ್ರಾಮ ಪಂಚಾಯಿತಿ ಸದಸ್ಯ ಕಾಳೇಯಂಡ ಸಾಬ ತಿಮ್ಮಯ್ಯ, ಸುಧಿ ಅಪ್ಪಯ್ಯ, ಮಹೇಶ್, ಮಿಟ್ಟು ಸೋಮಯ್ಯ, ಮತ್ತಿತರರು ಇದ್ದರು.