ಪೊನ್ನಂಪೇಟೆ, ಜು.೨೧: ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಯಿಂದ ತಮ್ಮ ಜಾನುವಾರುಗಳನ್ನು ಕಳೆದುಕೊಂಡು ಕಂಗೆಟ್ಟಿದ್ದ ರೈತರಿಗೆ ಈಗ ಕಾಡಾನೆಗಳ ಕಾಟ ತಲೆ ನೋವಾಗಿ ಪರಿಣಮಿಸಿದೆ. ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿರುವ ಕಾಡಾನೆಗಳು ಗದ್ದೆ, ತೋಟಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದು, ಆನೆಗಳ ಕಾಲಡಿಗೆ ಸಿಲುಕಿ ಬೆಳೆಗಳು ಧ್ವಂಸವಾಗುತ್ತಿವೆ. ಪೊನ್ನಂಪೇಟೆ ಸಮೀಪದ ಮುಗುಟಗೇರಿ ಗ್ರಾಮದ ಕಾಫಿ ತೋಟಗಳಿಗೆ ನುಗ್ಗಿರುವ ಕಾಡಾನೆ ಹಿಂಡು ಗ್ರಾಮದ ಮಲ್ಚೀರ ರಾಜ, ಮಲ್ಚೀರ ಗೌರಮ್ಮ ಪ್ರತಾಪ್ ಹಾಗೂ ಮುದ್ದಿಯಡ ಕಿರಣ್ ಎಂಬವರ ಕಾಫಿ ತೋಟಗಳಲ್ಲಿ ದಾಂಧಲೆ ನಡೆಸಿ ಕಾಫಿ ಗಿಡ, ಬಾಳೆಗಿಡ, ಅಡಿಕೆ,ತೆಂಗು ಹಾಗೂ ಕರಿ ಮೆಣಸಿನ ಬಳ್ಳಿಗಳನ್ನು ತುಳಿದು ನಾಶಗೊಳಿಸಿದ್ದು ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

ಮೊದಲೇ ಕೊರೊನಾ ನಡುವೆ ಕೃಷಿಕರಿಗೆ ಕೃಷಿ ಚಟುವಟಿಕೆ ನಡೆಸಲು ಕಾರ್ಮಿಕರ ಕೊರತೆಯಿದ್ದು, ಈಗ ಕಾಡಾನೆ ಭಯಕ್ಕೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆ ಕೂಡಲೇ ನಾಡಿಗೆ ಬಂದಿರುವ ಆನೆಗಳನ್ನು ಕಾಡಿಗಟ್ಟಬೇಕು. ಆನೆ ಹಾವಳಿಯಿಂದ ಬೆಳೆನಾಶವಾಗಿರುವ ಕೃಷಿಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.