ಸೋಮವಾರಪೇಟೆ, ಜು. ೨೦: ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಆ. ೧೪ ರಂದು ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಬೃಹತ್ ಲೋಕ ಅದಾಲತ್ ಹಮ್ಮಿಕೊಂಡಿದ್ದು, ಅದರಂತೆ ಆ. ೧೪ ರಂದು ಸೋಮವಾರಪೇಟೆ ಹಾಗೂ ಕುಶಾಲನಗರದ ನ್ಯಾಯಾಲಯಗಳಲ್ಲೂ ಅದಾಲತ್ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ನ್ಯಾಯಾಧೀಶರುಗಳು ಮನವಿ ಮಾಡಿದ್ದಾರೆ.

ಸೋಮವಾರಪೇಟೆ ನ್ಯಾಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅದಾಲತ್‌ನ ಬಗ್ಗೆ ಮಾಹಿತಿ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೋಕುಲ್ ಅವರು, ಸೋಮವಾರಪೇಟೆ ನ್ಯಾಯಾಲಯಕ್ಕೆ ಸಂಬAಧಿಸಿದAತೆ ೩ ಸಾವಿರಕ್ಕೂ ಅಧಿಕ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿದ್ದು, ಆ. ೧೪ ರಂದು ನಡೆಯುವ ಲೋಕ ಅದಾಲತ್‌ನಲ್ಲಿ ಹಲವಷ್ಟು ದಾವೆಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಪಕ್ಷಗಾರರು ಈ ಬಗ್ಗೆ ಮನಸ್ಸು ಮಾಡಬೇಕಿದೆ ಎಂದರು.

ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿರುವ ಪ್ರಕರಣ, ನ್ಯಾಯಾಲಯಕ್ಕೆ ವಿಚಾರಣೆಗೆ ಬರಲು ಬಾಕಿ ಇರುವ ಪ್ರಕರಣಗಳ ಪೈಕಿ ರಾಜೀ ಆಗಬಹುದಾದ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಗೋಕುಲ್ ತಿಳಿಸಿದರು.

ಚೆಕ್ ಅಮಾನ್ಯ, ಹಣ ರಿಕವರಿ, ಬ್ಯಾಂಕ್ ದಾವೆ, ವಿವಿಧ ಇಲಾಖೆಗಳ ಬಿಲ್, ಜೀವನಾಂಶ, ವಿಚ್ಚೇದನ ರಹಿತವಾಗಿ ದಾವೆ ಇತ್ಯರ್ಥ ಸೇರಿದಂತೆ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವ ಪ್ರಕರಣಗಳನ್ನು ಲೋಕ ಅದಾಲತ್‌ಗೆ ತರಲಾಗುವುದು ಎಂದರು.

ನ್ಯಾಯಿಕ ಸಂಧಾನಕಾರರು, ನ್ಯಾಯಾಂಗೇತರ ಸಂಧಾನಕಾರರ ಬೆಂಚ್‌ನಲ್ಲಿ ಪಕ್ಷಗಾರರ ಉಪಸ್ಥಿತಿಯಲ್ಲಿ ಚರ್ಚೆ ನಡೆಸಿ ದಾವೆ ಇತ್ಯರ್ಥ ಪಡಿಸಲು ಪ್ರಯತ್ನಿಸಲಾಗುವುದು. ಇಲ್ಲಿ ಪಕ್ಷಗಾರರ ಮೇಲೆ ಯಾವುದೇ ಒತ್ತಡ ಇರುವುದಿಲ್ಲ. ಪಕ್ಷಗಾರರು ಪರಸ್ಪರ ಒಪ್ಪಿಗೆ ನೀಡಿದರೆ ಮಾತ್ರ ಲೋಕ ಅದಾಲತ್‌ನಲ್ಲಿ ರಾಜಿ ಮಾಡುತ್ತೇವೆ. ಇಲ್ಲಿ ಯಾವುದೇ ಆದೇಶ, ನಿರ್ದೇಶನ ಇರುವುದಿಲ್ಲ ಎಂದು ನ್ಯಾಯಾಧೀಶರು ಮಾಹಿತಿ ನೀಡಿದರು.

ಪಕ್ಷಗಾರರ ನಡುವಿನ ಸಮಸ್ಯೆಯ ಮೂಲ ಅರಿತು ಅವರುಗಳ ಭಿನ್ನಾಭಿಪ್ರಾಯ ದೂರ ಮಾಡಿ, ಪಕ್ಷಗಾರರ ಮನವೊಲಿಸಿ ದಾವೆಗಳನ್ನು ಇತ್ಯರ್ಥಗೊಳಿಸುವ ವ್ಯವಸ್ಥೆಯೇ ಲೋಕ ಅದಾಲತ್ ಆಗಿದೆ. ಆದಾಗ್ಯೂ ಇದರಲ್ಲಿ ಸೂಚಿಸುವ ಪರಿಹಾರವನ್ನು ಪಕ್ಷಗಾರರು ಒಪ್ಪಲೇಬೇಕೆಂದಿಲ್ಲ. ಇಲ್ಲಿ ಪರಿಹಾರ ಕಾಣದಿದ್ದರೆ ಮತ್ತೆ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮುಂದುವರೆಯಬಹುದು. ಒಂದು ವೇಳೆ ಅದಾಲತ್‌ನಲ್ಲಿ ಪರಿಹಾರವಾದರೆ ಮೇಲ್ಮನವಿಗೆ ಅವಕಾಶ ಇರುವುದಿಲ್ಲ ಎಂದು ಗೋಕುಲ್ ಅವರು ಹೇಳಿದರು.

ಲೋಕ ಅದಾಲತ್‌ನಲ್ಲಿ ಭಾಗಿಯಾಗುವುದರಿಂದ ಪಕ್ಷಗಾರರ ಹಣ, ಸಮಯ ಉಳಿತಾಯವಾಗುತ್ತದೆ. ಶೀಘ್ರವಾಗಿ ನ್ಯಾಯ ಪಡೆಯಲು ಇದು ಉತ್ತಮ ವೇದಿಕೆಯಾಗಿದ್ದು, ಪಕ್ಷಗಾರರ ಸಂಬAಧವೂ ಉಳಿಯುತ್ತದೆ. ಬಯಸಿದ ನ್ಯಾಯವೂ ಸಿಗುತ್ತದೆ. ಹಾಗಾಗಿ ಎಲ್ಲರೂ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರತಿಭಾ ತಿಳಿಸಿದರು.

ಈಗಾಗಲೇ ರಾಜಿಯಾಗುವ ಪ್ರಕರಣಗಳನ್ನು ಗುರುತಿಸುವ ಪ್ರಕ್ರಿಯೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಅದಾಲತ್‌ನಲ್ಲಿ ಭಾಗಿಯಾಗುವವರು ತಮ್ಮ ವಕೀಲರ ಮೂಲಕ ಅಥವಾ ನೇರವಾಗಿ ನ್ಯಾಯಾಲಯಕ್ಕೆ ಮನವಿ ಮಾಡಬಹುದು. ಮೌಖಿಕವಾಗಿ ಮನವಿ ನೀಡಿದರೂ ಸ್ವೀಕರಿಸಲಾಗುವುದು. ಲೋಕ ಅದಾಲತ್‌ನ ಪ್ರಯೋಜನ ಪಡೆಯುವ ಮೂಲಕ ಶೀಘ್ರ ಹಾಗೂ ಬಯಸಿದ ನ್ಯಾಯ ಪಡೆಯಲು ಮುಂದಾಗಬೇಕೆAದು ಮನವಿ ಮಾಡಿದರು. ಗೊಷ್ಠಿಯಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಪದ್ಮನಾಭ್ ಉಪಸ್ಥಿತರಿದ್ದರು.