ಕುಶಾಲನಗರ, ಜು. ೨೧: ಕುಶಾಲನಗರದ ತಾವರೆಕೆರೆ ಒತ್ತುವರಿ ಜಾಗದ ತೆರವಿನ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಹೈ ಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕೆರೆ ಪ್ರದೇಶ ಒತ್ತುವರಿ ಕುರಿತು ವಕೀಲರಾದ ಎನ್.ಪಿ. ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯ ಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ಈ ಆದೇಶ ನೀಡಿದೆ. ಹೈಕೋರ್ಟ್ ನಿರ್ದೇಶನದಂತೆ ಈಗಾಗಲೇ ತಾವರೆಕೆರೆ ಪ್ರದೇಶದ ಸರ್ವೆಕಾರ್ಯ ನಡೆದಿದೆ ಈ ಕುರಿತ ವರದಿ ಸರ್ಕಾರದಿಂದ ಸ್ವೀಕರಿಸಿದ್ದು, ಕೆರೆ ವ್ಯಾಪ್ತಿಯ ೧೯ ಕಡೆ ಒತ್ತುವರಿ ನಡೆದಿದೆ ಎಂದು ಸರ್ಕಾರಿ ವಕೀಲರು ಪೀಠಕ್ಕೆ ಮಾಹಿತಿ ನೀಡಿದ್ದಾರೆ.

ನ್ಯಾಯಪೀಠ ಈ ಬಗ್ಗೆ ಸೂಚನೆ ನೀಡಿದ್ದು ಸರ್ವೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಕೆರೆ ವ್ಯಾಪ್ತಿಯ ಒತ್ತುವರಿ ಜಾಗ ತೆರವುಗೊಳಿಸಲು ಕೈಗೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ತಿಳಿಸಿದ್ದು ವಿಚಾರಣೆಯನ್ನು ಮುಂದೂಡಿದೆ.

ಈ ನಡುವೆ ರಾಜ್ಯದ ಎಲ್ಲಾ ಕೆರೆಗಳ ವಾಸ್ತವ ಸ್ಥಿತಿ ಮತ್ತು ಅಭಿವೃದ್ದಿ ಬಗ್ಗೆ ತಕ್ಷಣ ಹೈಕೋರ್ಟ್ಗೆ ವರದಿ ಸಲ್ಲಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾ ಅಧಿಕಾರಿಗಳಿಗೆ ನ್ಯಾಯಾಲಯ ಈಗಾಗಲೇ ಆದೇಶ ಹೊರಡಿಸಿದೆ.