ಮಡಿಕೇರಿ, ಜು. ೨೦: ಸಮಾಜಕ್ಕೆ ವಿವಿಧ ಸಂದೇಶಗಳನ್ನು ವಾಸ್ತವತೆಯನ್ನು ಪ್ರತಿಬಿಂಬಿಸುವಲ್ಲಿ ಚಲನಚಿತ್ರ ಮಾಧ್ಯಮವೂ ಒಂದಾಗಿದೆ. ಈ ಮೂಲಕ ವಿವಿಧ ಪರಿಕಲ್ಪನೆಗಳು, ಪ್ರಸ್ತುತದ ಆಗು - ಹೋಗುಗಳು, ಯುವ ಜನಾಂಗಕ್ಕೆ ಅಗತ್ಯ ಮಾಹಿತಿ, ಪುರಾತನ ಇತಿಹಾಸ ಇತ್ಯಾದಿ ಅಂಶಗಳು ನೇರವಾಗಿ ಜನರ ಹೃದಯ ಮುಟ್ಟುತ್ತವೆ. ಇಂತಹ ಒಂದು ವಿಭಿನ್ನ ಪ್ರಯತ್ನವಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಇದೇ ಪ್ರಥಮ ಬಾರಿಗೆ ಕೊಡವ ಕಿರು ಚಿತ್ರಗಳು ಎಂಬ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಸ್ಪಂದನ ದೊರೆತಿದೆ.

ಸುಮಾರು ೧೫ ನಿಮಿಷಗಳ ಕಾಲಾವಧಿಯಲ್ಲಿ ಈ ರೀತಿಯಾಗಿ ಹಲವು ಆಸಕ್ತ ಕಲಾವಿದರ ಬಳಗದಿಂದ ನಿರ್ಮಾಣಗೊಂಡ ೮ ಕಿರುಚಿತ್ರಗಳು ತಯಾರಾಗಿದ್ದು, ಇದರ ಸ್ಪರ್ಧೆ ಇಂದು ಪ್ರದರ್ಶನದ ರೂಪದಲ್ಲಿ ನಗರದ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಜರುಗಿತು. ಅಕಾಡೆಮಿ ಅಧ್ಯಕ್ಷೆ ಡಾ|| ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ಕೊರೊನಾ ನಿಯಮ ಪಾಲನೆಯೊಂದಿಗೆ ನಡೆದ ಸರಳ ಸಮಾರಂಭದಲ್ಲಿ ೮ ಕಿರುಚಿತ್ರಗಳ ಪ್ರದರ್ಶನ ನಡೆದು ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿ ಬಹುಮಾನ ಪ್ರಕಟಿಸಲಾಯಿತು.

‘ಕೋದಿ ಮೋವ’ ಕ್ಕೆ ಪ್ರಥಮ

ಕಿರುಚಿತ್ರ ಸ್ಪರ್ಧೆಯಲ್ಲಿ ಕೊದಿಮೋವ ಎಂಬ ಕಿರುಚಿತ್ರ ಪ್ರಥಮ ಸ್ಥಾನ ಪಡೆದುಕೊಂಡಿದೆ. ನಂಬಿಕೆ ಕಿರುಚಿತ್ರಕ್ಕೆ ದ್ವಿತೀಯ, ಪೊಮ್ಮಣ್ಣ್ ಚಿತ್ರ ತೃತೀಯ ಸ್ಥಾನ ತನ್ನದಾಗಿಸಿಕೊಂಡಿದೆ. ಕೊಡವರ ಜನಜೀವನ, ಸಂಸ್ಕೃತಿಯ ರಕ್ಷಣೆ, ಆಚಾರ-ವಿಚಾರ, ಕೃಷಿ, ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಗರಿಷ್ಠ ೧೫ ನಿಮಿಷಗಳ ೮ ಚಿತ್ರಗಳು ಸ್ಪರ್ಧೆ ಯಲ್ಲಿ ಪ್ರದರ್ಶನಗೊಂಡವು. ಯುವಪ್ರತಿಭೆಗಳು, ಹಿರಿಯ ಕಲಾವಿದರು, ಹೊಸ ನಟರು ಚಿತ್ರಗಳಲ್ಲಿ ಅಭಿನಯಿಸಿದ್ದು, ಉತ್ತಮ ಸಂದೇಶಗಳು ಕಿರುಚಿತ್ರದಲ್ಲಿ ಅಡಗಿದ್ದವು. ಪ್ರೇಕ್ಷಕರು ಕೂಡ ಪ್ರತಿಭೆಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂದೇಶ ಸಾರಿದ ಚಿತ್ರಗಳು

ಕಳ್ಳಿಚಂಡ ಡಿಂಪಲ್ ನಾಚಪ್ಪ ನಿರ್ದೇಶನದ ಕೊಡವಾಮೆರ ಬೀರ್ಯ ಕಿರುಚಿತ್ರ ಕೊಡಗಿನ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಯುವಜನಾಂಗ ಮುಂದಾಗಬೇಕು ಎಂಬ ಸಂದೇಶ ನೀಡಿತು. ಬಾಳೆಯಡ ಪ್ರತೀಶ್ ಪೂವಯ್ಯ ನಿರ್ದೇಶನದ ಪೊಮ್ಮಣ್ಣ್ ಚಿತ್ರ ಪಾಂಡವರು ಕೊಡಗು ದೇಶಕ್ಕೆ ಕಾಲಿಟ್ಟ ಸಂದರ್ಭ ನಡೆದ ಪೌರಾಣಿಕ ಚಿತ್ರಣದ ಬಗ್ಗೆ ತಿಳಿಸಿಕೊಟ್ಟಿತು. ವಿಶ್ವಕುಂಬೂರು, ವಿನುಕುಶಾಲಪ್ಪ ನಿರ್ದೇಶನದ ‘ಎಚ್ಚರ’ ಕಿರುಚಿತ್ರ ಯುವಜನತೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ಬಗ್ಗೆ ಜಾಗೃತಿ ಮೂಡಿಸಿತು. ಕೊಡವ ಮಕ್ಕಡ ಕೂಟ ಪ್ರಸ್ತುತಪಡಿಸಿದ ಕಣ್ಣ್-ಕೆÀಟ್ಟ್ ಚಿತ್ರ ಹಣದ ವ್ಯಾಮೋಹ ಬೇಡ ಎಂದು ಅರಿವು ಸೃಷ್ಟಿಮಾಡಿತು. ಮಂದನೆರವAಡ ಯುಗದೇವಯ್ಯ ನಿರ್ಮಾಣದ ಬೊಳ್ಳಜ್ಜಿರ ಬಿ. ಅಯ್ಯಪ್ಪ ನಿರ್ದೇಶನದ ನಂಬಿಕೆ ಎಂಬ ಕಿರುಚಿತ್ರ ಮಕ್ಕಳು ಹೆತ್ತವರನ್ನು ವೃದ್ಧಾಶ್ರಮಕ್ಕೆ ಬಿಡುವ ಚಿತ್ರಣವನ್ನು ಕಣ್ಣಿಗೆ ಕಟ್ಟಿಕೊಟ್ಟಿತ್ತು. ವೃದ್ಧಾಪ್ಯದಲ್ಲಿ ಹೆತ್ತವರಿಗೆ ಆಸರೆಯಾಗಿ ಎಂಬ ಸಂದೇಶ ಸಾರಿತು. ಅಪ್ಪಂಡ ಮನಸ್ಸ್ ಚಿತ್ರ ಅಪ್ಪನ ಆಸ್ತಿ ಬೇಕು, ಕಷ್ಟಪಟ್ಟು ಸಾಕಿದ ಅಪ್ಪ ಬೇಡವೇ.? ಎಂದು ಪ್ರಶ್ನೆ ಹುಟ್ಟಿಸಿ ಆಸ್ತಿಗಾಗಿ ಅಪ್ಪನನ್ನು ಮನೆಯಿಂದ ಹೊರ ದೂಡುವ ಮಕ್ಕಳು, ಸೊಸೆಯಂದಿರಿಗೂ ಮುಂದೆ ಇದೇ ರೀತಿ ಆಗುತ್ತದೆ ಎಂದು ಕಿರುಚಿತ್ರ ಎಚ್ಚರಿಸಿತು.

ಐಮಂಡ ಗೋಪಾಲ್ ಸೋಮಯ್ಯ ನಿರ್ದೇಶನದ ಕೊದಿಮೋವ ಕಿರುಚಿತ್ರ ಕೊಡವ ಜನಾಂಗದಲ್ಲಿ ಇತ್ತೀಚಿಗೆ ಹೆಚ್ಚಾಗಿ ನಡೆಯುತ್ತಿರುವ ಅಂತರಜಾತಿ ವಿವಾಹದಿಂದ ಆಗುವ ವ್ಯತಿರಿಕ್ತ ಪರಿಣಾಮದ ಬಗ್ಗೆ ಬೆಳಕು ಚೆಲ್ಲಿತು. ಇದರಿಂದಾಗುವ ಸಂಸ್ಕೃತಿ ವಿನಾಶದ ಬಗ್ಗೆ ಹಿರಿಯ ಸಾಹಿತಿ ನಾಗೇಶ್ ಕಾಲೂರು ಸಂಭಾಷಣೆ ಮನಮುಟ್ಟುವಂತಿತ್ತು. ಬೋಸ್ ಬೆಳ್ಯಪ್ಪ ರಚನೆಯ ದುರಾಸೆ

(ಮೊದಲ ಪುಟದಿಂದ) ಎಂಬ ಚಿತ್ರ ಪ್ರಸ್ತುತ ಕಾಲಘಟ್ಟದಲ್ಲಿ ಹಣಕ್ಕಾಗಿ ಕೌಟುಂಬಿಕ ಮೌಲ್ಯಕ್ಕೆ ಬೆಲೆಕೊಡದ ಬಗ್ಗೆ ಕನ್ನಡಿ ಹಿಡಿಯಿತು.

ಸಭಾ ಕಾರ್ಯಕ್ರಮ

ಕಿರುಚಿತ್ರ ಪ್ರದರ್ಶನಕ್ಕೂ ಮುನ್ನ ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದ ಹಿರಿಯ ಕಲಾವಿದ ನೆರವಂಡ ಉಮೇಶ್ ಮೊಣ್ಣಪ್ಪ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ, ಸಿನಿಮಾ ಮನೆ, ಮನಕ್ಕೆ ತಲುಪುವ ಅತ್ಯಂತ ಪ್ರಭಾವಶೀಲ ಮಾಧ್ಯಮ ವಾಗಿದೆ. ಸಿನಿಮಾಕ್ಕೆ ಸಮಯದ ಮಿತಿ ಇಲ್ಲ. ಐದು ನಿಮಿಷದ ಕಿರುಚಿತ್ರ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದೆ. ಪ್ರತಿಭೆಗಳಿಗೂ ಇದು ವೇದಿಕೆಯಾಗಿದೆ ಎಂದ ಅವರು, ಕೊಡವ ಜನಾಂಗದ ಉಪಜಾತಿಗಳು ವಿನಾಶದಂಚಿಗೆ ತಲುಪುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಪ್ರಸ್ತಾವಿಕವಾಗಿ ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ. ಹಲವು ರೀತಿಯ ಸ್ಪರ್ಧೆಗಳನ್ನು ಅಕಾಡೆಮಿ ವತಿಯಿಂದ ಆಯೋಜಿಸಲಾಗಿದೆ. ಭಾಷೆ ಬೆಳವಣಿಗೆಯಾಗಬೇಕಾದರೆ ಸಿನಿಮಾ ಕ್ಷೇತ್ರ ಪೂರಕವಾಗಿ ಹಾಗೂ ಪರಿಣಾಮಕಾರಿಯಾಗಿ ಸಹಕಾರಿ ಯಾಗುತ್ತದೆ. ಸಿನಿಮಾ ಕ್ಷೇತ್ರದಲ್ಲಿ ಕೊಡಗಿನ ಪ್ರತಿಭೆಗಳು ಸಾಧನೆ ಮಾಡಿದ್ದಾರೆ. ಕೊಡವ ಸಿನಿಮಾಗಳು ಅಂರ‍್ರಾಷ್ಟಿçÃಯ ಮಟ್ಟದಲ್ಲೂ ಸಾಧನೆ ಮಾಡಿದೆ. ಕೊಡಗಿನ ಯುವ ಪ್ರತಿಭೆಗಳಿಗೆ ಈ ಸ್ಪರ್ಧೆ ವೇದಿಕೆ ಯಾಗಿದೆ. ಬಹುಮಾನ ಬದಲು ಸ್ಪರ್ಧೆಯಿಂದ ಅನುಭವ ಪಡೆದುಕೊಳ್ಳಿ ಎಂದು ಕರೆ ನೀಡಿದರು.

ಇದೇ ಸಂದರ್ಭ ರೂ. ೬೫ ಸಾವಿರ ಮೌಲ್ಯದ ವಾದ್ಯ ಪರಿಕರ ಗಳನ್ನು ವಿತರಿಸಲಾಯಿತು. ಹಿರಿಯ ರಂಗಕರ್ಮಿ ಅಡ್ಡಂಡ ಅನಿತಾ ಕಾರ್ಯಪ್ಪ, ಕಾಂಡೇರ ಡಾನ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ರಿಜಿಸ್ಟಾçರ್ ಅಜ್ಜಿಕುಟ್ಟಿರ ಗಿರೀಶ್, ಸಂಚಾಲಕ ಡಾ. ಮೇಚೀರ ಸುಭಾಷ್ ನಾಣಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಜರಿದ್ದರು.