ಕುಶಾಲನಗರ, ಜು. ೨೧: ಕುಶಾಲನಗರ ಸುತ್ತ ಮುತ್ತ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೃಷಿಕರು ತಮ್ಮ ಬೆಳೆಹಾನಿಯೊಂದಿಗೆ ಆತಂಕದ ಪರಿಸ್ಥಿತಿ ಎದುರಿಸುವಂತಾಗಿದೆ. ಕಾವೇರಿ ನದಿ ಪಾತ್ರದಲ್ಲಿ ಬೆಳೆಸಿದ ಶುಂಠಿ, ಜೋಳ ಸೇರಿದಂತೆ ಆಹಾರ ಪದಾರ್ಥಗಳ ಬೆಳೆಗಳು ನೀರಲ್ಲಿ ಕೊಚ್ಚಿಹೋಗುವುದರೊಂದಿಗೆ ಹಲವೆಡೆ ಕೊಳೆತು ನಿಂತಿರುವ ದೃಶ್ಯ ಕಂಡುಬAದಿದೆ. ಕುಶಾಲನಗರ ಸಮೀಪದ ಕೊಪ್ಪ, ಆವರ್ತಿ ವ್ಯಾಪ್ತಿಯಲ್ಲಿ ಇಂತಹಾ ದೃಶ್ಯ ಸಾಮಾನ್ಯವಾಗಿದ್ದು ರೈತಾಪಿ ವರ್ಗದ ಗೋಳು ಹೇಳತೀರದು. ಸಾಲ ಮಾಡಿ ಎಕರೆಗಟ್ಟಲೆ ಭೂಮಿಯಲ್ಲಿ ಜೋಳ, ಶುಂಠಿ, ಉದ್ದು, ಅಲಸಂಡೆ, ಗೆಣಸು ಮತ್ತಿತರ ಬೆಳೆಗಳನ್ನು ಬೆಳೆದಿರುವ ರೈತರು ಇದೀಗ ಹೊಲದಲ್ಲಿ ಬೆಳೆದು ನಿಂತಿದ್ದ ಪೈರನ್ನು ಆಯುತ್ತಿರುವ ದೃಶ್ಯ ಮನಕಲಕುವಂತಿದೆ.
ಮಳೆಗಾಳಿಗೆ ಬೆಳೆಗಳು ಮಣ್ಣು ಪಾಲಾಗಿದ್ದು, ಕೈಗೆ ಬಂದ ಫಸಲು ಸಂಪೂರ್ಣ ನಾಶವಾಗಿರುವುದು ಬಹುತೇಕ ಕಾಣಬಹುದು. ಅತಿವೃಷ್ಟಿಯಿಂದ ಫಸಲು ಸಂಪೂರ್ಣ ನೆಲ ಕಚ್ಚಿದ್ದು ಬಹುತೇಕ ಕೃಷಿ ಜಲಾವೃತಗೊಂಡಿರುವ ದೃಶ್ಯ ಸಾಮಾನ್ಯವಾಗಿದೆ. ಈ ನಡುವೆ ಜಾನುವಾರುಗಳಿಗೆ ಕೂಡ ಆಹಾರದ ಕೊರತೆ ಎದುರಾಗಿದ್ದು, ನೀರು ಪಾಲಾದ ಬೆಳೆಗಳೆ ಇವುಗಳ ಆಹಾರವಾಗಿದೆ ಎನ್ನುತ್ತಾರೆ ಆವರ್ತಿಯ ಕೃಷಿಕ ಮಹೇಶ್ ಎಂಬವರು ತಾನು ಬೆಳೆದ ಬೆಳೆ ನಷ್ಟ ಅಂದಾಜು ೫ ಲಕ್ಷಕ್ಕೂ ಅಧಿಕವಾಗಿದ್ದು ಯಾವುದೇ ಪರಿಹಾರ ಲಭಿಸಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದೇ ರೀತಿ ಕಣಿವೆ ಹೆಬ್ಬಾಲೆ ಶಿರಂಗಾಲ ಗುಡ್ಡೆಹೊಸೂರು ಹಾರಂಗಿ ವ್ಯಾಪ್ತಿಯಲ್ಲಿಯೂ ಬೆಳೆದ ಜೋಳ ಮತ್ತಿತರ ಬೆಳೆಗಳು ನಾಶವಾದ ದೃಶ್ಯ ಗೋಚರಿಸಿದೆ. ಕಳೆದ ೪ ವರ್ಷಗಳಿಂದ ಸತತವಾಗಿ ಬೆಳೆ ಹಾನಿ ಉಂಟಾಗಿದೆ. ಕೊರೊನಾ ನಡುವೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಆಸುಪಾಸಿನ ಜನರಿಂದ ಕೈಸಾಲ ಪಡೆದು ಅಷ್ಟಿಷ್ಟು ಜಮೀನಿನಲ್ಲಿ ಬೆಳೆದ ಬೆಳೆಗಳು, ಕಣ್ಣೆದುರೇ ಕೊಳೆತು ನಿಂತಿರುವುದು ಬೇಸರದ ಸಂಗತಿ ಎನ್ನುತ್ತಾರೆ ಕೃಷಿಕ ಮಹಿಳೆ ಅನಿತಾ. ಇಲ್ಲಿನ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ರೈತಾಪಿ ವರ್ಗದ ಸಹಾಯಕ್ಕೆ ಕೈಜೋಡಿಸಬೇಕಾಗಿದೆ. - ಚಂದ್ರಮೋಹನ್