ಕುಶಾಲನಗರ, ಜು. ೨೦: ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಅವರಿಂದ ಜನವಿರೋಧಿ ನಡವಳಿಕೆ, ಅಕ್ರಮ ಆಸ್ತಿಗಳಿಕೆ ಮತ್ತು ದೌರ್ಜನ್ಯದ ವರ್ತನೆ ಆರೋಪಿಸಿ ಕುಶಾಲನಗರ ತಾಲೂಕು ಪ್ರಜ್ಞಾವಂತ ನಾಗರಿಕ ಒಕ್ಕೂಟ ವತಿಯಿಂದ ಪ್ರತಿಭಟನೆ ನಡೆಯಿತು.
ಸ್ಥಳೀಯ ಗಣಪತಿ ದೇವಾಲಯ ಮುಂಭಾಗ ಸೇರಿದ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿ.ಪಿ. ಶಶಿಧರ್, ಕೆ.ಪಿ. ಚಂದ್ರಕಲಾ ಮತ್ತು ಹೆಚ್.ಎಸ್. ಅಶೋಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕುಶಾಲನಗರದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹೇಶ್ ಅವರ ವಿರುದ್ಧ ಘೋಷಣೆ ಕೂಗಿ ಅವರ ಮೇಲೆ ತಕ್ಷಣ ಕಾನೂನು ಕ್ರಮಕೈಗೊಳ್ಳ ಬೇಕೆಂದು ಮೇಲಧಿಕಾರಿಗಳಿಗೆ ಒತ್ತಾಯಿಸಿದರು. ಸಾರ್ವಜನಿಕ ರೊಂದಿಗೆ ಅತ್ಯಂತ ಅನುಚಿತವಾಗಿ ವರ್ತಿಸುವ ಪರಿಪಾಟ ಹೊಂದಿರುವುದಾಗಿ ಆರೋಪಿಸಿದ ವಿ.ಪಿ. ಶಶಿಧರ್ ಜನಪ್ರತಿನಿಧಿಗಳ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸುವುದರ ಮೂಲಕ ಗೌರವಕ್ಕೆ ಚ್ಯುತಿ ತರುತ್ತಿದ್ದಾರೆ. ಕರ್ತವ್ಯ ಸಂದರ್ಭ ಕಾನೂನು ನಿಯಮಗಳನ್ನು ಉಲ್ಲಂಘಿಸಿ ಕಿರುಚಿತ್ರಗಳಲ್ಲಿ ಸರ್ಕಾರಿ ವಾಹನ ಬಳಸಿ ದುರ್ಬಳಕೆ ಮಾಡಿರು ವುದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದರ ಮೂಲಕ ಅಧಿಕಾರ ದರ್ಪ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.
ಕುಶಾಲನಗರ ಸಮೀಪ ಮಾದಾಪಟ್ಟಣ ಬಳಿ ಮಹೇಶ್ ಅವರು ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಬಂಗಲೆ ನಿರ್ಮಿಸಿದ್ದು, ಸರ್ಕಾರಕ್ಕೆ ಈ ಬಗ್ಗೆ ಲೆಕ್ಕ ನೀಡುವ ಸಂದರ್ಭ ವಂಚನೆ ಮಾಡಿದ್ದಾರೆ. ಬೇನಾಮಿ ಹೆಸರಿನಲ್ಲಿ ಆಸ್ತಿ ಪಾಸ್ತಿ ಗಳಿಸಿದ್ದು ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕೆಂದು ವಿ.ಪಿ. ಶಶಿಧರ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಕೆ.ಪಿ. ಚಂದ್ರಕಲಾ ಮತ್ತು ಜಿ.ಪಂ. ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್ ಮಾತನಾಡಿ, ಮಹೇಶ್ ಇಲಾಖೆಯ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿರುವ ಬಗ್ಗೆ ಆರೋಪಿಸಿದರು. ಇವರಿಂದ ಜನರಿಗೆ ಇಲಾಖೆಯ ಬಗ್ಗೆ ಕೆಟ್ಟ ಭಾವನೆ ಬರುವಂತಾಗಿದೆ. ಪೊಲೀಸ್ ಠಾಣೆಗಳಲ್ಲಿ ಅಭದ್ರತೆ ಸೃಷ್ಟಿಯಾಗುತ್ತಿದೆ, ತಕ್ಷಣ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ನಂತರ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡ ಭರತ್, ಕುಶಾಲನಗರ ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಆನಂದ್ ಕುಮಾರ್, ದಿನೇಶ್, ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಒಕ್ಕೂಟದ ಸಹ ಸಂಚಾಲಕ ರಾಜೀವ್, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜೋಸೆಫ್ ವಿ ಸೋನ್ಸ್, ಎಂ.ಎಸ್. ರಾಜೇಶ್, ಎಸ್ಡಿಪಿಐನ ಭಾಷಾ, ಅಂಬೇಡ್ಕರ್ ವೇದಿಕೆಯ ಆದಂ ಮತ್ತಿತರರು ಇದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಸೋಮವಾರಪೇಟೆ ವೃತ್ತ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ಕುಶಾಲನಗರ ಪಟ್ಟಣ, ಗ್ರಾಮಾಂತರ, ಸುಂಟಿಕೊಪ್ಪ ಠಾಣಾಧಿಕಾರಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.