ವೀರಾಜಪೇಟೆ, ಜು. ೨೦: ಕೊಡಗು ಜಿಲ್ಲೆಯ ಪ್ರಪ್ರಥಮ ಐ.ಸಿ.ಯು. ಒಳಗೊಂಡ ರೂ. ೩೩ ಲಕ್ಷ ವೆಚ್ಚದ ಅತ್ಯಾಧುನಿಕ ‘ಡಿ-ಲೆವೆಲ್ ಆ್ಯಂಬ್ಯುಲೆನ್ಸ್’ ಲೋಕಾರ್ಪಣೆ ಗೊಂಡಿದೆ. ವೀರಾಜಪೇಟೆಯ ಡೊನೇರ‍್ಸ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ನಗರದ ಈದ್ಗಾ ಮೈದಾನದ ಸಭಾಂಗಣದಲ್ಲಿ ಆ್ಯಂಬ್ಯುಲೆನ್ಸ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ರೆ.ಫಾ. ಮದಲೈ ಮುತ್ತು ಅವರು ಸೇವಾ ಕಾರ್ಯಗಳನ್ನು ಮಾಡುವುದು ಮನುಕುಲಕ್ಕೆ ಅತ್ಯವಶ್ಯಕ ವಾಗಿದೆ. ಸಮಾಜಕ್ಕೆ ಮಾಡುವ ಸೇವೆಯು ನಿಸ್ವಾರ್ಥವಾಗಬೇಕು ಎಂದರು. ಮಹೋನ್ನತವಾದ ಸುಸಜ್ಜಿತವಾದ ಆ್ಯಂಬ್ಯುಲೆನ್ಸ್ಸ್ ಸೇವೆ ಎಲ್ಲರಿಗೂ ಸಹಕಾರಿಯಾಗಲಿದೆ ಎಂದರು.

ವೀರಾಜಪೇಟೆ ಶಾಫಿ ಜಮಾ ಮಸೀದಿ ಖತೀಬ ಅಬ್ದುಲ್ ರವೂಫ್ ಹುದವಿ ಅವರು ಮಾತನಾಡಿ ಸಮಾಜದ ಸಮಸ್ಯೆಗಳಿಗೆ ಮಿಡಿಯುವ ಮನಸ್ಸು ಪ್ರತಿಯೊಬ್ಬರಿಗೂ ಲಭಿಸುವುದಿಲ್ಲ. ಇಲ್ಲಿನ ಯುವ ಮಿತ್ರರು ಸಂಘವನ್ನು ಕಟ್ಟಿ ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆಯನ್ನು ನೀಡುವಲ್ಲಿ ಭಿನ್ನವಾಗಿ ಯೋಚಿಸಿ ಇಂದು ದಾನಿಗಳ ಸಹಕಾರದಿಂದ ಆ್ಯಂಬ್ಯುಲೆನ್ಸ್ ಖರೀದಿ ಮಾಡಿ ಸಮಾಜಕ್ಕೆ ಸೇವಾ ಕೊಡುಗೆ ನೀಡಿದ್ದಾರೆ ಎಂದರು.

ಡೊನೇರ‍್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಗೌರವ ಅಧ್ಯಕ್ಷ ಕೆ.ಹೆಚ್. ಮೊಹಮ್ಮದ್ ರಾಫಿ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸಂಸ್ಥೆಯು ೧೦ ವಷಗಳಿಂದ ವಿವಿಧ ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ. ನಗರ ವಾಸಿಗಳಿಗೆ ಲಾಕ್‌ಡೌನ್ ಸಂದರ್ಭ ಸುಮಾರು ೫೦೦ ಮಂದಿಗೆ ಜಾತಿ, ಮv,À ಭೇದವಿಲ್ಲದೆ ಅಗತ್ಯವಸ್ತುಗಳ ಕಿಟ್ ವಿತರಣೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಧನಸಹಾಯ ಮತ್ತು ಪಠ್ಯೇತರ ಸಾಮಗ್ರಿಗಳ ವಿತರಣೆ, ಸಾಮೂಹಿಕ ಸುನ್ನತ್ ಕಾರ್ಯಕ್ರಮ, ಪ್ರಕೃತಿ ವಿಕೋಪ ಸಂದರ್ಭ ಸೇವೆ ಸಂಸ್ಥೆಯ ಸದಸ್ಯರು ತಮ್ಮ ಸೇವೆಯನ್ನು ಒದಗಿಸಿದ್ದಾರೆ.

ಸತತ ಎಂಟು ತಿಂಗಳ ಶ್ರಮ ದಿಂದಾಗಿ ದಾನಿಗಳ ಸಹಕಾರದಿಂದ ಸುಮಾರು ೩೩ ಲಕ್ಷ ವೆಚ್ಚದಲ್ಲಿ ಆ್ಯಂಬ್ಯುಲೆನ್ಸ್ ಖರೀದಿ ಮಾಡಿದ್ದು, ಸಮಾಜ ಸೇವೆಗೆ ಮುಂದಾಗಿದ್ದೇವೆ ಎಂದರು.

ಡೊನೇರ‍್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಸಂಸ್ಥೆಯ ಅಧ್ಯಕ್ಷ ಎನ್.ಕೆ. ಶಮೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಇಂತಿಯಾಸ್, ಯಾಸಿರ್ ಅರ್ಫಾತ್, ನಿಝಾಮ್, ಜೈನುಲ್ ಅಬೀದ್, ಹನೀಫ್ ಮತ್ತು ಶಫೀಕ್ ಅವರಿಗೆ ಗಣ್ಯರಿಂದ ಸನ್ಮಾನಿಸಲಾಯಿತು. ಉದ್ಯಮಿ ಸಿ.ಎ. ಬಶೀರ್ ಅವರು ಆ್ಯಂಬ್ಯುಲೆನ್ಸ್ ವಾಹನವನ್ನು ಚಾಲನೆ ಮಾಡುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಆರಕ್ಷಕ ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್, ಡಾ. ಆಶ್ವೀನ್, ಎಸ್.ಹೆಚ್, ಮೊಯಿನುದ್ದೀನ್, ವಕೀಲ ಡಿ.ಸಿ. ಧ್ರುವಕುಮಾರ್, ವರ್ತಕ ಆರ್.ಕೆ. ಅಬ್ದುಲ್ ಸಲಾಂ, ಪ.ಪಂ. ಸದಸ್ಯರಾದ ಎಸ್.ಹೆಚ್, ಮತೀನ್, ಸಿ.ಹೆಚ್. ಆಲಿ, ಉದ್ಯಮಿ ನಾಗರಾಜ್ ಚುಪ್ಪ, ಶಾಫಿ ಜುಮಾ ಮಸೀದಿಯ ಅಧ್ಯಕ್ಷ ಟಿ.ಹೆಚ್. ರಜಾಕ್, ಪ.ಪಂ. ಸದಸ್ಯ ಸಿ.ಕೆ. ಪ್ರಥ್ವಿನಾಥ್, ಕೆ.ಯು. ಫಾರ್ಮಸಿಯ ಮಾಲೀಕ ಸಜೀವನ್, ಶಾಫಿ ಪಿ. ಮಾತನಾಡಿದರು.

ಸಮಾರಂಭದಲ್ಲಿ ಡೊನೇರ‍್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಸಂಸ್ಥೆಯ ಸರ್ವ ಸದಸ್ಯರು, ನಗರದ ವಿವಿಧ ಸಂಘಟನೆಗಳ ಪ್ರಮುಖರು, ಪದಾಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.

-ಕೆ.ಕೆ.ಎಸ್.