ಮಡಿಕೇರಿ, ಜು. ೧೯: ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರ್ನಾಡು-ಮರಗೋಡು ರಸ್ತೆ ಬದಿಯಲ್ಲಿ ವ್ಯಕ್ತಿಯೋರ್ವ ತ್ಯಾಜ್ಯ ಎಸೆದಿದ್ದು, ಮರಗೋಡು ಪಂಚಾಯಿತಿ ವತಿಯಿಂದ ಕಸ ಎಸೆದ ಸೂರಜ್ ಎಂಬವರಿಗೆ ರೂ. ೨,೫೦೦ ದಂಡ ವಿಧಿಸಲಾಗಿದೆ. ತಾ. ೧೮ ರಂದು ಕಗ್ಗೋಡ್ಲು ಗ್ರಾಮದ ಸೂರಜ್ ಅವರು ಮರಗೋಡು ಮೂರ್ನಾಡು ರಸ್ತೆ ಬದಿ ೭ ಚೀಲಗಳನ್ನೊಳಗೊಂಡ ಕಸದ ರಾಶಿಯನ್ನು ಎಸೆದಿದ್ದು, ಮರಗೋಡು ಪಂಚಾಯಿತಿ ಸದಸ್ಯರಾದ ಮೋಹನ ಹಾಗೂ ಬೋಸ್ ಅವರು ಇದನ್ನು ಗಮನಿಸಿ ಸೂರಜ್ ಅವರನ್ನು ಸ್ಥಳಕ್ಕೆ ಕರೆಸಿ ತ್ಯಾಜ್ಯ ತೆರವುಗೊಳಿಸಿದ್ದಾರೆ. ನಂತರ ಬುದ್ಧಿವಾದ ಹೇಳಿ ಪಂಚಾಯಿತಿ ವತಿಯಿಂದ ದಂಡ ವಿಧಿಸಲಾಗಿದೆ.