ಟಿ ಮಳೆಗಾಲಕ್ಕೆ ಹೊಂದುವ ಆಹಾರ ಉತ್ಪನ್ನಗಳ ಮಾರಾಟ ಜೋರು ಟಿ ಬಳಂಜಿಗೂ ‘ಡಿಮ್ಯಾಂಡ್’
ಮಡಿಕೇರಿ, ಜು. ೧೯: ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಆರಂಭವಾಗಿದೆ. ಕೊರೆಯುವ ಚಳಿ-ಗಾಳಿ ಮೈನಡುಗಿಸುತ್ತಿದೆೆÉ. ಮಂಜಿನ ವಾತಾವರಣ ಸೃಷ್ಟಿಯಾಗಿದ್ದು, ಉಷ್ಣಾಂಶ ಭರಿತ ಆಹಾರ ಉತ್ಪನ್ನಕ್ಕೆ ಜಿಲ್ಲೆಯಲ್ಲಿ ಬೇಡಿಕೆ ಹೆಚ್ಚಾಗಿದೆ.
ಜನರು ಬೆಚ್ಚಗಿರಲು ಏಡಿ, ಕಣಿಲೆ, ಕೆಸ ಖರೀದಿಗೆ ಮುಂದಾಗಿದ್ದಾರೆ. ಈಗಾಗಲೇ ಕಕ್ಕಡ ಮಾಸ ಆರಂಭವಾಗಿದ್ದು, ಮಳೆಗಾಲದಲ್ಲಿ ಹೆಚ್ಚಾಗಿ ಸಿಗುವ ಏಡಿಗಳು, ಬಿದಿರಿನ ಕಣಿಲೆ, ಮರಕೆಸ ಜಿಲ್ಲೆಯ ಮಾರುಕಟ್ಟೆಗೆ ಈಗಾಗಲೇ ಲಗ್ಗೆಯಿಟ್ಟಿವೆ. ಇವುಗಳಿಗೆ ಈಗ ಭಾರೀ ಬೇಡಿಕೆಯೂ ಸೃಷ್ಟಿಯಾಗಿದೆ.
ಕೊಡಗಿನ ಜನರು ಪ್ರತೀ ಮಳೆಗಾಲದಲ್ಲೂ ವಾತಾವರಣಕ್ಕೆ ಹೊಂದುವ ಖಾದ್ಯಗಳ ಮೊರೆ ಹೋಗುತ್ತಾರೆ. ಅದರಲ್ಲೂ ಮೈಕೊರೆಯುವ ಚಳಿಯಿಂದ ಬೆಚ್ಚಗಿರಿಸುವಂತಹ ಆಹಾರ ಪದಾರ್ಥಗಳನ್ನು ಸೇವಿಸಲು ಬಯಸುತ್ತಾರೆ. ಈಗ ಅಂತಹ ಆಹಾರ ಪದಾರ್ಥಗಳಾದ ಏಡಿ, ಕಣಿಲೆಗಳು ಮಡಿಕೇರಿ ಸೇರಿದಂತೆ ನಾನಾ ಭಾಗಗಳಲ್ಲಿ ಮಾರಾಟವಾಗುತ್ತಿವೆ.
ಹಿಂದೆ ಮಳೆಗಾಲದಲ್ಲಿ ಭತ್ತದ ಗದ್ದೆ, ಹಳ್ಳಕೊಳ್ಳದಲ್ಲಿ ಏಡಿಗಳು ಸಿಗುತ್ತಿದ್ದವು. ಖಾದ್ಯಪ್ರಿಯರೂ ಮುಗಿಬಿದ್ದು ಖರೀಸುತ್ತಿದ್ದರು. ಈಗ ಬೇಡಿಕೆ ಹೆಚ್ಚಿದ್ದರೂ ಏಡಿ ಮಾರಾಟಗಾರರ ಸಂಖ್ಯೆ ಕಡಿಮೆಯಿದೆ. ಏಡಿ ಲಭ್ಯತೆಯೂ ಹಿಂದಿನಷ್ಟು ಇಲ್ಲ ಎಂದು ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಸಮೀಪ ಏಡಿ ಮಾರಾಟ ಮಾಡುತ್ತಿರುವ ಮಾರಾಟಗಾರ ಕುಮಾರ್ ಹೇಳುತ್ತಾರೆ.
ಸದ್ಯ ಮಡಿಕೇರಿಯಲ್ಲಿ ಒಂದು ಡಜನ್‌ಗೆ ರೂ. ೩೦೦, ಕೆಜಿಗೆ ೨೫೦ರ ಬೆಲೆಗೆ ಏಡಿಗಳು ಮಾರಾಟವಾಗುತ್ತಿವೆ. ಅಲ್ಲೇ ಶುಚಿಗೊಳಿಸಬೇಕಾದರೆ ರೂ. ೨೦ ಹೆಚ್ಚುವರಿಯಾಗಿ ನೀಡಬೇಕಾಗಿದೆ. ಹಾರಂಗಿ ಹಿನ್ನೀರಿನಲ್ಲಿ ಮಾರಾಟಕ್ಕೆ ಬೇಕಾದ ಏಡಿಗಳು ಲಭ್ಯವಾಗುತ್ತಿವೆ.
ಕಣಿಲೆ ಖರೀದಿ ಜೋರು
ಉಷ್ಣಾಂಶ ಹಾಗೂ ಔಷಧೀಯ ಗುಣ ಹೊಂದಿರುವ ಆಹಾರಗಳಿಗೆ ಜಿಲ್ಲೆಯಲ್ಲಿ ಹೆಚ್ಚು ಬೇಡಿಕೆಯಿವೆÉ. ಕೊರೊನಾ ಪರಿಸ್ಥಿತಿಗೂ ಮುನ್ನ ಕಣಿಲೆಯನ್ನು ಸ್ಥಳೀಯರು ಸೇರಿದಂತೆ ಪ್ರವಾಸಿಗರು ಹೆಚ್ಚಾಗಿ ಖರೀದಿಸುತ್ತಿದ್ದರು.
ಇದೀಗ ಪ್ರವಾಸಿಗರು ಇಲ್ಲದ ಹಿನ್ನೆಲೆ ಮಾರಾಟ ಕಡಿಮೆಯಾಗಿದೆ. ಆದರೆ, ಸ್ಥಳೀಯರು ಹೆಚ್ಚಾಗಿ ಕಣಿಲೆಯನ್ನು ಖರೀದಿ ಮಾಡುತ್ತಿದ್ದಾರೆ. ಉತ್ಪನ್ನಕ್ಕೆ ಬೇಡಿಕೆಯಿದ್ದರು ಅಗತ್ಯಕ್ಕೆ ಅನುಗುಣವಾಗಿ ಕಣಿಲೆ ಪೂರೈಕೆಯಾಗುತ್ತಿಲ್ಲ. ಮಳೆ ಹೆಚ್ಚಿರುವ ಹಿನ್ನೆಲೆ ಪೂರೈಕೆಗೆ ತೊಡಕಾಗಿದೆ. ಸುಮಾರು ಕಾಲು ಕೆ.ಜಿ. ತೂಕ ಹೊಂದಿರುವ ಕಣಿಲೆಗೆ ರೂ. ೫೦ ಬೆಲೆ ಇದೆ ಎಂದು ವ್ಯಾಪಾರಿ ಸುಶೀಲ ಹೇಳುತ್ತಾರೆ.
ಮರಕೆಸ ಸೊಪ್ಪು ಕೂಡ ಔಷಧ ಗುಣಗಳೊಂದಿಗೆ ಉಷ್ಣಾಂಶ ಹೊಂದಿರುವ ಖಾದ್ಯವಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಮರಕೆಸವನ್ನು ಜನರು ಬಳಸುತ್ತಾರೆ. ಇದರಿಂದ ಪತ್ರೊಡೆ, ಬಜ್ಜಿಗಳನ್ನು ತಯಾರಿಸಿ ಸವಿಯುತ್ತಾರೆ. ಕೆಸ ಮಾರಾಟವೂ ಜಿಲ್ಲೆಯಲ್ಲಿ ಶುರುವಾಗಿದೆ.
ಲಾಕ್‌ಡೌನ್ ಪರಿಸ್ಥಿತಿಗೂ ಮುನ್ನ ಮನೆಗಳಲ್ಲಿ ಮಾತ್ರವಲ್ಲದೆ ಹೋಂಸ್ಟೇ, ರೆಸಾರ್ಟ್ಗಳಲ್ಲೂ ಮಳೆಗಾಲಕ್ಕೆ ಪೂರಕವಾದ ಖಾದ್ಯಗಳನ್ನು ತಯಾರು ಮಾಡಲಾಗುತ್ತಿತ್ತು. ಏಡಿ ಸಾರು, ಏಡಿ ಡ್ರೆöÊ, ಕಣಿಲೆ ಉಪ್ಪಿನಕಾಯಿ, ಕಣಿಲೆ ಪಲ್ಯಕ್ಕೂ ಬೇಡಿಕೆ ಇತ್ತು. ಲಾಕ್‌ಡೌನ್ ಹಿನ್ನೆಲೆ ಮುಚ್ಚಿದ್ದ ಆತಿಥ್ಯ ಕೇಂದ್ರಗಳು ಇದೀಗ ತೆರೆದುಕೊಂಡಿದ್ದು ಪ್ರವಾಸಿಗರು ಬರುತ್ತಿದ್ದು, ಅವರಿಗೂ ಆತಿಥ್ಯ ಕೇಂದ್ರದವರು ಖಾದ್ಯಗಳನ್ನು ತಯಾರಿಸಿ ಉಣಬಡಿಸುತ್ತಿದ್ದಾರೆ.
ಈಗಾಗಲೇ ಕಣಿಲೆಯ ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡಲಾಗುತ್ತಿದ್ದು, ಉತ್ತಮವಾಗಿ ಮಾರಾಟವಾಗುತ್ತಿದೆ. ಮಳೆಗಾಲದಲ್ಲಿ ಮಾತ್ರ ದೊರಕುವ ಹಿನ್ನೆಲೆ ಬೇಡಿಕೆ ಹೆಚ್ಚಿದೆ ಎಂದು ಪ್ರಾಜೆಕ್ಟ್ ಕೂರ್ಗ್ನ ಸಂಚಾಲಕ ಬಾಲಜಿ ಕಶ್ಯಪ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಬಳಂಜಿಗೂ ಬೇಡಿಕೆ
ಮಳೆಗಾಲದಲ್ಲಿ ಬಳಂಜಿಗೆ ಬೇಡಿಕೆ ಸೃಷ್ಟಿಯಾಗುವುದು ಸಹಜ. ಈ ಬಾರಿ ಕೂಡ ಬಳಂಜಿಗಳು ಮಾರಾಟವಾಗುತ್ತಿವೆ. ರೂ. ೪೫೦ ರಿಂದ ೬೦೦ರ ಬೆಲೆಯ ತನಕ ಬಳಂಜಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಸಣ್ಣ ಹಾಗೂ ದೊಡ್ಡ ಗಾತ್ರದ ಬಳಂಜಿ ಮಡಿಕೇರಿಯಲ್ಲಿ ಮಾರಾಟವಾಗುತ್ತಿದ್ದು, ಬಟ್ಟೆ ಒಣಗಿಸಲು ಇದು ಸಹಕಾರಿಯಾಗಿದೆ. ಈ ವಾತಾವರಣದಲ್ಲಿ ಬಟ್ಟೆ ಒಣಗುವುದು ಸ್ವಲ್ಪ ಕಷ್ಟ. ಹಿದ್ದಲನ್ನು ಬೆಂಕಿ ಮಾಡಿ ಬಳಂಜಿ ಮುಚ್ಚಿ ಅದರ ಮೇಲೆ ಬಟ್ಟೆ ಒಣಹಾಕಿದರೆ ಬೇಗನೆ ಒಣಗುತ್ತದೆ. ಆದರಿಂದ ಇದನ್ನು ಜನರು ಮಳೆಗಾಲದಲ್ಲಿ ಖರೀದಿಸುತ್ತಾರೆ.
ಕುಶಾಲನಗರ, ಕೊಪ್ಪ ಭಾಗದಲ್ಲಿ ಬಿದಿರಿನ ನಾರಿನಿಂದ ಬಳಂಜಿಯನ್ನು ತಯಾರಿಸಿ ಮಡಿಕೇರಿಗೆ ತಂದು ಮಾರಾಟ ಮಾಡುತ್ತಿದ್ದೇವೆ. ಕಳೆದ ಒಂದು ವಾರದಿಂದ ಉತ್ತಮ ವ್ಯಾಪಾರವಿದೆ ಎಂದು ವ್ಯಾಪಾರಿ ಸೋಮಶೇಖರ್ ಹೇಳುತ್ತಾರೆ. -ಹೆಚ್.ಜೆ. ರಾಕೇಶ್