ಸಿದ್ದಾಪುರ, ಜು. ೧೯: ರಾಜ್ಯ ಸರ್ಕಾರವು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆAದು ಕೆ.ಪಿ.ಸಿ.ಸಿ. ಕಾನೂನು, ಮಾನವ ಹಕ್ಕು ಘಟಕದ ರಾಜ್ಯಾಧ್ಯಕ್ಷ, ಕೆ.ಪಿ.ಸಿ.ಸಿ ವಕ್ತಾರರಾದ ಎ.ಎಸ್ ಪೊನ್ನಣ್ಣ ಆರೋಪಿಸಿದರು. ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಬಾಡಗ ಬಾಣಂಗಾಲ ಗ್ರಾಮದ ವಾರ್ಡ್ ೧ರಲ್ಲಿ ತಮ್ಮ ತಾಯಿ ಅಜ್ಜಿಕುಟ್ಟೀರ ಪೊನ್ನಮ್ಮ ದತ್ತಿ ನಿಧಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗ್ರಾಮಸ್ಥರಿಗೆ ಉಚಿತವಾಗಿ ತೆಗೆಸಿಕೊಟ್ಟಿರುವ ಕೊಳವೆ ಬಾವಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದಲ್ಲಿ ಸಚಿವರುಗಳ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲದೇ ಅಧಿಕಾರದ ದಾಹಕ್ಕಾಗಿ ತೀವ್ರ ಪೈಪೋಟಿ ನಡೆಸುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ಜನರ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜನತೆ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಮಾತನಾಡಿ, ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯಲ್ಲಿ ವನ್ಯ ಪ್ರಾಣಿಗಳ ಹಾವಳಿ ನಡುವೆ ಇಲ್ಲಿನ ಜನತೆ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ದೂರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಲ್ದಾರೆ ವಲಯ ಕಾಂಗ್ರೆಸ್ ಅಧ್ಯಕ್ಷ ಸಜಿ ಥೋಮಸ್ ಮಾತನಾಡಿ ಬಾಡಗಬಾಣಂಗಾಲ ಗ್ರಾಮದ ಒಂದನೇ ವಾರ್ಡ್ನ ವ್ಯಾಪ್ತಿಗೆ ಒಳಪಡುವ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಇದನ್ನು ಮನಗಂಡ ಎ.ಎಸ್. ಪೊನ್ನಣ್ಣ ಅವರು ಜನತೆಯ ಸಮಸ್ಯೆಗೆ ಸ್ಪಂದಿಸಿ ತಮ್ಮ ಸ್ವಂತ ಖರ್ಚಿನಲ್ಲಿ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಿಕೊಟ್ಟಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಎ.ಎಸ್. ಪೊನ್ನಣ್ಣ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಾಲ್ದಾರೆಯ ಜನಪರ ಸಂಘಟನೆಯ ವತಿಯಿಂದ ಕೇಕ್ ಕತ್ತರಿಸಿ ಹಂಚಲಾಯಿತು. ಅಲ್ಲದೇ ಮಾಲ್ದಾರೆ ವಲಯ ಕಾಂಗ್ರೆಸ್ ವತಿಯಿಂದ ಎ.ಎಸ್ ಪೊನ್ನಣ್ಣ, ಧರ್ಮಜ ಉತ್ತಪ್ಪ ರಂಜಿ ಪೂಣಚ್ಚ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಬಾನಂಡ ಪ್ರಥ್ಯು, ಟಾಟೂ ಮೊನ್ನಪ್ಪ, ಮಾಳೇಟಿರ ಸಾಬೂ ಕಾಳಪ್ಪ, ಚಿನ್ನಮ್ಮ, ವಿಜು ಬಿದ್ದಪ್ಪ, ಸುರೋಜ್, ಗ್ರಾ.ಪಂ. ಸದಸ್ಯರುಗಳಾದ ಕಿರಣ್, ಅನೀಫ, ನಿಯಾಸ್ ಇನ್ನಿತರರು ಹಾಜರಿದ್ದರು. ಬಾವ ಮಾಲ್ದಾರೆ ಸ್ವಾಗತಿಸಿ ವಂದಿಸಿದರು.