ನಾಪೋಕ್ಲು, ಜು. ೧೯: ಸಮೀಪದ ಕರಡ, ಅರಪಟ್ಟು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿಯಿಂದ ನಾಟಿ ಮಾಡಲು ತಯಾರಾಗಿದ್ದ ಪೈರಿನ ಗದ್ದೆಗಳು ಸಂಪೂರ್ಣವಾಗಿ ನಾಶಗೊಂಡು ನಷ್ಟ ಸಂಭವಿಸಿದೆ.

ಅರಪಟ್ಟು ಗ್ರಾಮದ ಪೊದ್ದಮಾನಿಯಲ್ಲಿ ಕಾಡಾನೆಗಳ ಹಾವಳಿಯಿಂದ ಚೆಲಮಂಡ ಬೆಲ್ಲು ಅವರ ನಾಟಿಗೆ ತಯಾರಾದ ಭತ್ತದ ಪೈರು ಸಂಪೂರ್ಣವಾಗಿ ನಾಶವಾಗಿದ್ದು, ಪುನಃ ಬಿತ್ತನೆ ಕಾರ್ಯ ನಡೆಸುವ ಪರಿಸ್ಥಿತಿ ಉಂಟಾಗಿದೆ. ಅದರೊಂದಿಗೆ ಕರಡ ಗ್ರಾಮದ ಬೇಪಡಿಯಂಡ ಕುಟುಂಬಸ್ಥರ ಗದ್ದೆಗೂ ಕೂಡ ಸಂಪೂರ್ಣವಾಗಿ ಹಾನಿಯಾಗಿ ನಷ್ಟ ಉಂಟಾಗಿದೆ.

ಅರಣ್ಯ ಇಲಾಖೆ ಕೂಡಲೇ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವದರೊಂದಿಗೆ ಕಾಡಾನೆಗಳನ್ನು ಶಾಶ್ವತವಾಗಿ ಕಾಡಿಗಟ್ಟುವ ಕಾರ್ಯ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.