ಸೋಮವಾರಪೇಟೆ, ಜು.೧೯: ಕಳೆದೆರಡು ದಿನಗಳ ಹಿಂದೆ ಕೊಂಚ ಬಿಡುವು ನೀಡಿದ್ದ ಮಳೆ ಮತ್ತೆ ಆರ್ಭಟ ಮುಂದುವರೆಸಿದ್ದು, ಸೋಮವಾರ ಪೇಟೆ ತಾಲೂಕಿನಾದ್ಯಂತ ಗಾಳಿ ಯೊಂದಿಗೆ ಮಳೆ ಸುರಿಯುತ್ತಿದೆ.
ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶ ವ್ಯಾಪ್ತಿಯಲ್ಲಿ ಈಗಾಗಲೇ ೧೦೦ ಇಂಚಿನಷ್ಟು ಮಳೆ ದಾಖಲಾಗಿದ್ದು, ಶಾಂತಳ್ಳಿ, ಹರಗ ವ್ಯಾಪ್ತಿಯಲ್ಲಿ ಈವರೆಗೆ ೭೦ ಇಂಚು ಮಳೆಯಾಗಿದೆ. ಪುಷ್ಪಗಿರಿ ಬೆಟ್ಟತಟದ ಗ್ರಾಮಗಳಾದ ಕುಡಿಗಾಣ, ನಾಡ್ನಳ್ಳಿ, ಕೊತ್ನಳ್ಳಿ, ಹೆಗ್ಗಡಮನೆ, ಮಲ್ಲಳ್ಳಿ ಭಾಗದಲ್ಲಿ ಪ್ರಸಕ್ತ ಜನವರಿಯಿಂದ ಈವರೆಗೆ ೧೦೦ ಇಂಚು ಮಳೆಯಾಗಿದೆ.
ಭಾರೀ ಮಳೆ-ಗಾಳಿಯಿಂದಾಗಿ ವಾತಾವರಣವೂ ಶೀತಮಯವಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದ್ದು, ರಸ್ತೆಯ ಗುಂಡಿಗಳಲ್ಲಿ ಕೊಳಚೆ ನೀರು ಸಂಗ್ರಹವಾಗಿವೆ. ಕಳೆದೆರಡು ದಿನಗಳಿಂದ ಮಳೆ ಬಿರುಸುಗೊಂಡಿದ್ದು, ನದಿತೊರೆಗಳು, ಹೊಳೆಗಳಲ್ಲಿ
(ಮೊದಲ ಪುಟದಿಂದ) ನೀರಿನ ಹರಿವು ಹೆಚ್ಚಾಗುತ್ತಿದೆ. ಮಳೆಯಿಂದಾಗಿ ಭತ್ತ ಕೃಷಿ ಕಾರ್ಯ ಚುರುಕು ಪಡೆಯುತ್ತಿದ್ದು, ರೈತಾಪಿ ವರ್ಗ ಗದ್ದೆಯ ಉಳುಮೆ, ಸಸಿಮಡಿ ತಯಾರಿ, ನಾಟಿ ಕಾರ್ಯಕ್ಕೆ ಸಿದ್ಧತೆ ಕೈಗೊಳ್ಳುತ್ತಿದ್ದಾರೆ. ಕುಡಿಗಾಣ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಕುಡಿಗಾಣ ಹೊಳೆ ತುಂಬಿ ಹರಿಯುತ್ತಿದ್ದು, ಸೇತುವೆ ಮುಳುಗಡೆಯಾಗುವ ಭೀತಿ ಎದುರಾಗಿದೆ. ಈ ಸೇತುವೆ ಮುಳುಗಡೆಯಾದರೆ ಗ್ರಾಮಸ್ಥರು ಹೊರಭಾಗದ ಸಂಪರ್ಕ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ಕುಡಿಗಾಣ ನಿವಾಸಿ ಕೆ.ಟಿ. ದಿನೇಶ್ ತಿಳಿಸಿದ್ದಾರೆ.
ಇಲ್ಲಿನ ಜೂನಿಯರ್ ಕಾಲೇಜು ಟರ್ಫ್ ಮೈದಾನ, ಅಂಬೇಡ್ಕರ್ ವಸತಿ ಶಾಲೆ, ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿ ನಿಲಯಗಳಿಗೆ ತೆರಳುವ ರಸ್ತೆ ಕೆಸರಿನ ಕೊಂಪೆಯಾಗಿದೆ.