ಮಡಿಕೇರಿ, ಜು. ೧೯ : ತಾ. ೨೧ ರಂದು ಬಕ್ರೀದ್ ಹಬ್ಬದ ಹಿನ್ನೆಲೆ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ, ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಿಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮನವಿ ಮಾಡಿದ್ದಾರೆ.

ಬಕ್ರೀದ್ ಹಬ್ಬದ ಸಂದರ್ಭ ಅನುಸರಿಸಬೇಕಾದ ಮಾರ್ಗಸೂಚಿ ಬಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರ ಜೊತೆ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ೧೯ ಮಾರ್ಗಸೂಚಿ ಅನುಸರಿಸಿ ಪ್ರಾರ್ಥನೆ ಸಲ್ಲಿಸಬೇಕು. ಒಂದು ವೇಳೆ ಅಧಿಕ ಜನಸಂಖ್ಯೆ ಆಗಮಿಸಿದ್ದಲ್ಲಿ ಬ್ಯಾಚ್ ಮಾದರಿಯಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಮಾತನಾಡಿ ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ನ್ನು ಕಡ್ಡಾಯವಾಗಿ ಧರಿಸಬೇಕು, ೬೫ ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಹಾಗೂ ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಬೇಕು. ಪ್ರಾರ್ಥನೆ ಸಂದರ್ಭ

(ಮೊದಲ ಪುಟದಿಂದ) ಕನಿಷ್ಟ ೬ ಅಡಿ ಅಂತರ ಕಾಯ್ದುಕೊಳ್ಳಬೇಕು. ಮಸೀದಿಗಳಿಗೆ ಪ್ರವೇಶಿಸುವ ಮೊದಲು ದೇಹದ ತಾಪಮಾನದ ತಪಾಸಣೆಯೊಂದಿಗೆ, ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್‌ನಿಂದ ಶುಚಿಗೊಳಿಸಿಕೊಳ್ಳಬೇಕು. ಪರಸ್ಪರ ಹಸ್ತಲಾಘವ ಮತ್ತು ಆಲಿಂಗನ ಮಾಡಬಾರದು ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿವಧೆ ಮತ್ತು ಬಲಿದಾನ ಮಾಡಬಾರದು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಅಧಿನಿಯಮ ೨೦೨೦ ಜಾರಿಯಲ್ಲಿದ್ದು, ಕಾಯ್ದೆಯನ್ನು ತಪ್ಪದೆ ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ, ಆಟದ ಮೈದಾನ, ಉದ್ಯಾನವನ, ಮಸೀದಿ ಹಾಗೂ ಇತರೇ ಧಾರ್ಮಿಕ ಸ್ಥಳ ಮತ್ತು ಆವರಣದಲ್ಲಿ ಪ್ರಾಣಿವಧೆ ಮಾಡಬಾರದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ವಕ್ಫ್ ಮಂಡಳಿ ಸಲಹಾ ಸಮಿತಿ ಅಧ್ಯಕ್ಷ ಕೆ.ಎ.ಯಾಕೂಬ್ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು, ಜಿಲ್ಲಾಡಳಿತ ಕಾಲಕಾಲಕ್ಕೆ ಹೊರಡಿಸಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದರು.

ಒಂದೇ ಬಾರಿ ಹೆಚ್ಚು ಜನ ಪ್ರಾರ್ಥಿಸಲು ಆಗಮಿಸಿದಲ್ಲಿ ೨ ಬ್ಯಾಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದು. ತಾ. ೨೧ ರಂದು ಬೆಳಿಗ್ಗೆ ೧೦ ಗಂಟೆಯೊಳಗೆ ಬಕ್ರೀದ್ ಪ್ರಾರ್ಥನೆ ಮುಗಿಯಲಿದೆ ಎಂದು ಹೇಳಿದರು.

ಪ್ರಮುಖರಾದ ಉಸ್ಮಾನ್ ಮಾತನಾಡಿ ಕಳೆದ ವರ್ಷದಂತೆ ಈಬಾರಿಯು ಸಹ ಜಿಲ್ಲಾಡಳಿತ ಹಾಗೂ ಸರ್ಕಾರದ ನಿಯಮಗಳನ್ನು ಪಾಲಿಸಲಾಗುವುದು ಎಂದು ಹೇಳಿದರು.

ಸೈಯದ್ ಮಾತನಾಡಿ ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಿಸಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಜಿ.ಪಂ ಯೋಜನಾ ನಿರ್ದೇಶಕರಾದ ಶ್ರಿಕಂಠಮೂರ್ತಿ, ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಸುರೇಶ್ ಭಟ್, ಮುಸ್ಲೀಂ ಧಾರ್ಮಿಕ ಮುಖಂಡರು, ಪೊಲೀಸ್ ಇಲಾಖೆ ಅಧಿಕಾರಿಗಳು, ಪಶುಪಾಲನಾ ಇಲಾಖಾ ತಾಲೂಕು ಮಟ್ಟದ ಅಧಿಕಾರಿಗಳು ಇತರರು ಇದ್ದರು.