ಮಡಿಕೇರಿ,ಜು.೧೭: ೨೦೧೮ ಹಾಗೂ ೧೯ರಲ್ಲಿ ಪ್ರಕೃತಿ ವಿಕೋಪದಿಂದಾಗಿ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿರುವವರಿಗೆ ಸರಕಾರದ ವತಿಯಿಂದ ಗಾಳಿಬೀಡಿನಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ಇಂದು ಲಾಟರಿ ಮೂಲಕ ಹಂಚಿಕೆ ಮಾಡಲಾಯಿತು.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿಂದು ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆಗಳ ಸಂಖ್ಯೆಗಳನ್ನು ನೀಡಲಾಯಿತು. ಈ ಬಗ್ಗೆ ಮಾಹಿತಿ ನೀಡಿದ ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಾಂಡು ಅವರು, ಗಾಳಿಬೀಡಿನಲ್ಲಿ ೧೪೦ಮನೆಗಳು ಪೂರ್ಣಗೊಂಡಿದ್ದು, ಈ ಪೈಕಿ ಇಂದು ೯೬ ಮಂದಿಗೆ ಮನೆಗಳ ಸಂಖ್ಯೆಗಳನ್ನು ನೀಡಲಾಗಿದೆ. ಪಟ್ಟಿಯಲ್ಲಿ ಇನ್ನೂ ಹಲವರ ಹೆಸರುಗಳಿದ್ದು, ದಾಖಲಾತಿ ಗಳಲ್ಲಿ ವ್ಯತ್ಯಾಸಗಳಿರು ವದರಿಂದ ಪರಿಶೀಲನೆ ಮಾಡಿ ನಂತರದಲ್ಲಿ ನೀಡಲಾಗುವದು ಎಂದು ತಿಳಿಸಿದರು. ನಿಷ್ಪಕ್ಷಪಾತವಾಗಿ ಸಂಖ್ಯೆಗಳನ್ನು ಫಲಾನುಭವಿಗಳಿಂದಲೇ ಲಾಟರಿ ಎತ್ತಿಸುವ ಮೂಲಕ ಹಂಚಿಕೆ ಮಾಡಲಾಗುತ್ತಿದೆ. ಕೆ.ನಿಡುಗಣೆಯಲ್ಲೂ ೭೬ ಮನೆಗಳ ನಿರ್ಮಾಣವಾಗುತ್ತಿದ್ದು, ಈಗಾಗಲೇ ಗುರುತಿಸಲಾಗಿರುವ, ಪಟ್ಟಿಯಲ್ಲಿರುವ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಹಂಚಿಕೆ ಮಾಡಲಾಗುವದೆಂದರು.
ಕೆಲವರು ಮನೆ ಇದ್ದರೂ ಸರಕಾರದ ಮನೆ ಪಡೆದುಕೊಂಡಿದ್ದಾರೆ ಎಂಬ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಹಾಗೂ ನಗರ ವ್ಯಾಪ್ತಿಯಲ್ಲಿ ನಗರಸಭೆಯಿಂದ ನೋಟೀಸ್ ಜಾರಿ ಮಾಡಲಾಗಿದೆ. ಈಗಾಗಲೇ ಜಂಬೂರು ಬಾಣೆಯಲ್ಲಿ ಮನೆ ಪಡೆದುಕೊಂಡಿದ್ದ ೨೨ ಮಂದಿ ತಮ್ಮ ಹಳೆಯ ಮನೆಗಳನ್ನು ಕೆಡವಿದ್ದಾರೆ. ಚಾಮುಂಡೇಶ್ವರಿ ನಗರದಲ್ಲೂ ೨೦ ಮಂದಿ ಪಡೆದುಕೊಂಡಿರುವ ಬಗ್ಗೆ ಮಾಹಿತಿ ಇದ್ದು, ನೋಟೀಸ್ ಜಾರಿ ಮಾಡಲಾಗಿದೆ ಎಂದು ಹೇಳಿದರು. ಒಟ್ಟು ೮೪೦ ಮಂದಿ ಫಲಾನುಭವಿಗಳಿಗೆ ಮನೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಮಹೇಶ್, ಕಂದಾಯ ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.