ಮಡಿಕೇರಿ ಜು.೧೬ : ಇತ್ತೀಚೆಗೆ ಪ್ರಕಟಗೊಂಡಿರುವ ಕೊಡಗು ಜಿ.ಪಂ ಕ್ಷೇತ್ರಗಳ ಮೀಸಲಾತಿ ಪಟ್ಟಿಯಲ್ಲಿ ನ್ಯೂನತೆ ಕಂಡು ಬಂದಿದ್ದು, ಕೊಡವರು ಸ್ಪರ್ಧಿಸದಂತೆ ನೋಡಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೊಡವರು ಜಿ.ಪಂ ಗೆ ಆಯ್ಕೆಯಾಗದಂತೆ ಷಡ್ಯಂತ್ರ ರೂಪಿಸಲಾಗಿದೆ ಎಂದು ವ್ಯಾಲಿ ಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್‌ನ ಅಧ್ಯಕ್ಷ ಹಂಚೆಟ್ಟಿರ ಮನುಮುದ್ದಪ್ಪ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿ.ಪಂ ಮೀಸಲಾತಿ ಪಟ್ಟಿ ಕೊಡವರ ಅಸ್ತಿತ್ವವನ್ನು ಪ್ರಶ್ನಿಸುವಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಯಾವ ಭಾಗದಲ್ಲಿ ಕೊಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೋ ಆ ಕ್ಷೇತ್ರಗಳನ್ನು ಇತರ ಪಂಗಡದವರಿಗೆ ಮೀಸಲಿರಿಸಲಾಗಿದೆ. ಪೊನ್ನಂಪೇಟೆ ತಾಲೂಕು ಟಿ.ಶೆಟ್ಟಿಗೇರಿ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಕೊಡವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾಗಿದೆ. ಅಲ್ಲದೆ ವೀರಾಜಪೇಟೆ ತಾಲೂಕಿನ ಕದನೂರು ಕ್ಷೇತ್ರ ಕೂಡ ಕೊಡವರೇ ಇರುವ ಭಾಗವಾಗಿದ್ದರೂ ಅಲ್ಲಿಯೂ ಬೇರೆ ಪಂಗಡದವರು ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಮಡಿಕೇರಿ ತಾಲೂಕಿನಿಂದ ಒಬ್ಬನೇ ಒಬ್ಬ ಕೊಡವ ಆಯ್ಕೆಯಾಗದಂತೆ ಹುನ್ನಾರ ನಡೆಸಲಾಗಿದೆ. ನರಿಯಂದಡ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊಡವರಿದ್ದಾರೆ. ಅಲ್ಲಿ ಹಿಂದುಳಿದ ವರ್ಗ (ಅ) ಮೀಸಲಾತಿ ನೀಡಲಾಗಿದೆ. ಭಾಗಮಂಡಲ, ಮೂರ್ನಾಡು, ಮರಗೋಡು ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಈ ಮೂರು ಕ್ಷೇತ್ರಗಳಲ್ಲಿ ಕೊಡವರು

(ಮೊದಲ ಪುಟದಿಂದ) ಆಯ್ಕೆಯಾಗಲು ಸಾಧ್ಯವೇ ಇಲ್ಲ. ನಾಪೋಕ್ಲು ಹಾಗೂ ಸಂಪಾಜೆ ಕ್ಷೇತ್ರದಲ್ಲಿ ಯಾರು ಆಯ್ಕೆಯಾಗಬಹುದೆಂದು ತಿಳಿದಿರುವ ವಿಷಯ ಎಂದು ಹೇಳಿಕೆ ನೀಡಿದ್ದಾರೆ.

ಕೊಡವ ಸಂಸ್ಕöÈತಿಯ ಕೇಂದ್ರವಾಗಿರುವ ಕಾಲೂರು, ಮುಕ್ಕೋಡ್ಲು, ಕೆ.ಬಾಡಗ, ಕಡಗದಾಳು, ಇಬ್ನಿವಳವಾಡಿ ಗ್ರಾಮಗಳು ಬರುವ ಕಡಗದಾಳು ಕ್ಷೇತ್ರವನ್ನು ಅನುಸೂಚಿತ ಜಾತಿಗೆ ಮೀಸಲಿರಿಸಲಾಗಿದೆ. ಕಳೆದ ಬಾರಿಯೂ ಕಡಗದಾಳು ಅನುಸೂಚಿತ ಜಾತಿಗೆ ಮೀಸಲಾಗಿದ್ದು, ಮತ್ತೆ ೨ನೇ ಬಾರಿಗೆ ಅದೇ ಮೀಸಲಾತಿಯನ್ನು ಪುನರಾವರ್ತಿಸಲಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊಡವರು ಇರುವ ಏಕೈಕ ಕ್ಷೇತ್ರ ಮಾದಾಪುರವನ್ನು ಹಿಂದುಳಿದ ವರ್ಗ (ಅ) ಕ್ಕೆ ಮೀಸಲಿರಿಸಲಾಗಿದೆ. ಇಲ್ಲಿನ ಕಾಂಡನಕೊಲ್ಲಿ ಇಗ್ಗೋಡ್ಲು, ಮೂವತ್ತೊಕ್ಲು ಶಿರಂಗಳ್ಳಿ, ಗರ್ವಾಲೆ, ಸೂರ್ಲಬ್ಬಿ, ಮಂಕ್ಯ ಗ್ರಾಮಗಳಲ್ಲಿರುವ ಕೊಡವರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿರುವ ಅವರು, ಈ ನ್ಯೂನತೆಯನ್ನು ಕೊಡವರು ಬಹಿರಂಗವಾಗಿ ಪ್ರಶ್ನೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇಂತಹ ಸಂದರ್ಭದಲ್ಲೂ ಮೌನಕ್ಕೆ ಶರಣಾದರೆ ಕೊಡಗು ಜಿ.ಪಂ.ನಲ್ಲಿ ಕೊಡವ ಸದಸ್ಯರನ್ನು ಹುಡುಕುವ ಪರಿಸ್ಥಿತಿ ಎದುರಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊಡವ ಸಂಘಟನೆಗಳು, ಕೊಡವ ಸಮಾಜಗಳು, ಅಖಿಲ ಕೊಡವ ಸಮಾಜ, ಫೆಡರೇಷನ್ ಆಫ್ ಕೊಡವ ಸಮಾಜ ಕೊಡವರ ಅಸ್ತಿತ್ವಕ್ಕಾಗಿ ಚುನಾವಣಾ ಆಯೋಗ ಹಾಗೂ ನ್ಯಾಯಾಲಯದ ಮೆಟ್ಟಿಲೇರುವ ಅನಿವಾರ್ಯತೆ ಇದೆ. ವ್ಯಾಲಿ ಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದಿರುವ ಮನುಮುದ್ದಪ್ಪ, ನ್ಯಾಯಾಲಯಕ್ಕೆ ಹೋಗಲು ಸಂಘಟನೆ ಈಗಾಗಲೇ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.