ಮಡಿಕೇರಿ, ಜು.೧೬: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಪಯಸ್ವಿನಿ ನದಿ ತುಂಬಿ ಹರಿಯುತ್ತಿದೆ. ನದಿ ತೀರದ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಅತಂತ್ರ ಪರಿಸ್ಥಿತಿಯಲ್ಲಿರುವ ಕುಟುಂಬಗಳಿಗೆ ಕೊಡಗು ರಕ್ಷಣಾ ವೇದಿಕೆ ನೆರವು ನೀಡಿತು.
ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದಿರುವ ಕುಟುಂಬಗಳನ್ನು ಭೇಟಿ ಮಾಡಿದ ಕೊರವೇ ಅಧ್ಯಕ್ಷ ಪವನ್ ಪೆಮ್ಮಯ್ಯ ಹಾಗೂ ಪದಾಧಿಕಾರಿಗಳು ನೊಂದವರಿಗೆ ಸಾಂತ್ವನ ಹೇಳಿದರು. ಸುಮಾರು ೧೫ ದಿನಗಳಿಗಾಗುವಷ್ಟು ಆಹಾರ ಸಾಮಗ್ರಿಗಳನ್ನು ಕೂಡ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಪವನ್ ಪೆಮ್ಮಯ್ಯ ಅತಿವೃಷ್ಟಿಯಾದಾಗ ನೆರವಿಗೆ ಧಾವಿಸಲು ಕೊಡಗು ರಕ್ಷಣಾ ವೇದಿಕೆಯ ತಂಡ ರಚನೆಗೊಂಡಿದ್ದು, ಜಿಲ್ಲೆಯ ಮೂಲೆ ಮೂಲೆಯಲ್ಲಿ ಕಾರ್ಯಾಚರಿಸಲಿದೆೆ ಎಂದರು.
ಕೊಯನಾಡು ಗ್ರಾಮದ ಕುಟುಂಬಗಳಿಗೆ ಕಾಳಜಿ ಕೇಂದ್ರದಲ್ಲಿರುವವರೆಗೂ ನೆರವು ನೀಡಲಾಗುವುದು ಮತ್ತು ಕೊರವೇಯ ಈ ಭಾಗದ ಪದಾಧಿಕಾರಿಗಳು ಪ್ರತಿದಿನ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಲಿದ್ದಾರೆ ಎಂದು ತಿಳಿಸಿದರು.
ಕೊರವೇ ಚೆಂಬು ಘಟಕದ ಅಧ್ಯಕ್ಷ ಜ್ಞಾನೇಶ್ ನಿಡಿಂಜಿ ಹಾಗೂ ಸಂಪಾಜೆ ಕಾರ್ಯಕರ್ತರು ಹಾಜರಿದ್ದರು.