ಕೂಡಿಗೆ, ಜು. ೧೬: ಹಾರಂಗಿ ಅಣೆಕಟ್ಟೆಯ ಹೂಳು ತೆಗೆಯುವ ಬಗ್ಗೆ ಕ್ಷೇತ್ರದ ಶಾಸಕರು ಅನೇಕ ಬಾರಿ ಅಧಿವೇಶನದಲ್ಲಿ ಚರ್ಚೆ ನಡೆಸಿದ ಪರಿಣಾಮವಾಗಿ ಹಾರಂಗಿ ಅಣೆಕಟ್ಟೆಯ ಹೂಳು ತೆಗೆಯಲು ಈಗಾಗಲೇ ಸರಕಾರದ ಸೂಚನೆಯಂತೆ ಕಾವೇರಿ ನೀರಾವರಿ ನಿಗಮದ ವತಿಯಿಂದ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಹಾರಂಗಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಾವೇರಿ ನಿಗಮದ ಮೂಲಕ ಈಗಾಗಲೇ ರಾಜ್ಯ ಮಟ್ಟದಲ್ಲಿ ಎರಡು ಬಾರಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಟೆಂಡರ್ನಲ್ಲಿ ಭಾಗವಹಿಸಿದ್ದ ಟೆಂಡರ್ದಾರರ ಟೆಂಡರ್ ಸಮರ್ಪಕವಾಗದ ಕಾರಣ ಅದನ್ನು ರದ್ದು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಿಗಮದ ಮೂಲಕ ಮೂರನೆಯ ಟೆಂಡರ್ ಪ್ರಕ್ರಿಯೆಯನ್ನು ಕರೆಯಲಾಗುವುದು. ಆ ಮೂಲಕ ಕ್ಷೇತ್ರದ ಶಾಸಕರ ಸಲಹೆಯಂತೆ ಹಾರಂಗಿ ಅಣೆಕಟ್ಟೆಯ ಹೂಳು ಮತ್ತು ಇತರ ತಡೆಗೋಡೆಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ವಿ. ಸೋಮಣ್ಣ ಹೇಳಿದರು.
ಈಗಾಗಲೇ ರೂ. ೧೩೦ ಕೋಟಿ ವೆಚ್ಚದ ಕಾಮಗಾರಿಯಡಿಯಲ್ಲಿ ಹಾರಂಗಿ ಅಣೆಕಟ್ಟೆಯ ಹೂಳೆತ್ತುವುದು ಮತ್ತು ಮಾದಾಪುರ-ಹಟ್ಟಿಹೊಳೆವರೆಗೆ ಕೆಲ ಭಾಗಗಳಲ್ಲಿ ತಡೆಗೋಡೆ ಸೇರಿದಂತೆ ಅನೇಕ ಕಾಮಗಾರಿಗಳು ನಡೆಯಬೇಕಾಗಿದ್ದು, ಈಗಾಗಲೇ ರಾಜ್ಯ ನೀರಾವರಿ ಸಚಿವರು ಒಪ್ಪಿಗೆ ನೀಡಿ ಟೆಂಡರ್ ಕರೆಯಲು ಸೂಚನೆ ನೀಡಿರುತ್ತಾರೆ. ಅದರಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕಾರ್ಯೊನ್ಮುಖರಾಗಿದ್ದಾರೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನುಡಿದರು.
ಈ ಸಂದರ್ಭ ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ, ಪಿರಿಯಾಪಟ್ಟಣ ಶಾಸಕ ಮಹದೇವ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಗೋಪಾಲಸ್ವಾಮಿ ಸೇರಿದಂತೆ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್ ಕುಡಾ ಅಧ್ಯಕ್ಷ ಎಂ.ಎA. ಚರಣ್ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ವಿವಿಧ ಘಟಕದ ಪದಾಧಿಕಾರಿಗಳು ಹಾಜರಿದ್ದರು.