ಮಡಿಕೇರಿ, ಜು. ೧೬: ಸರ್ಕಾರದ ಮಾರ್ಗಸೂಚಿಯಂತೆ, ಕೋವಿಡ್ -೧೯ರ ಪ್ರಕರಣಗಳು ಕೊಡಗಿನಲ್ಲಿ ದೈನಂದಿನವಾಗಿ ಕಂಡು ಬರುತ್ತಿರುವುದರಿಂದ ವೀರಾಜಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಮುಂಜಾಗ್ರತಾ ಕ್ರಮವಾಗಿ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ವಸತಿ ಗೃಹಗಳಲ್ಲಿ ತಂಗಲು ಬರುವವರಿಗೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.
ವಸತಿ ಗೃಹದಲ್ಲಿ ತಂಗಲು ಬರುವವರಿಂದ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಪಡೆಯಬೇಕಿದೆ. ವಸತಿ ಗೃಹಗಳ ಕೊಠಡಿಯನ್ನು ಪ್ರವಾಸಿಗಳ ನಿರ್ಗಮದ ನಂತರ ೨೪ ಗಂಟೆಗಳ ಅವಧಿವರೆಗೆ ಬೇರೆಯವರಿಗೆ ನೀಡತಕ್ಕದಲ್ಲ, ಪ್ರವಾಸಿಗರು ಅಥವಾ ಸಾರ್ವಜನಿಕರಿಗೆ ಕೋಣೆ ನೀಡುವ ಮುನ್ನ ಶುಚಿಗೊಳಿಸಿ ಸ್ಯಾನಿಟೈಸನ್ನು ಕಡ್ಡಾಯವಾಗಿ ಮಾಡತಕ್ಕದ್ದು, ಜಿಲ್ಲೆಯ ಹೊರಗಿನಿಂದ ಬರುವ ಎಲ್ಲಾ ವ್ಯಕ್ತಿಗಳ ಗುರುತಿನ ಚೀಟಿ, ನೆಗೆಟಿವ್ ವರದಿಯ ದಾಖಲೆಗಳನ್ನು ಹಾಗೂ ಮೊಬೈಲ್ ಸಂಖ್ಯೆಯನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಇಡತಕ್ಕದ್ದು, ಪ್ರವಾಸಿಗರಿಂದ ಉತ್ಪತಿಯಾದ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡತಕ್ಕದ್ದು, ಶೌಚಾಲಯಗಳ ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡತಕ್ಕದ್ದು ಎಂದು ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.