ಮಡಿಕೇರಿ, ಜು. ೧೬: ಕಾಂಗ್ರೆಸ್ ಕಾನೂನು, ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕು ಘಟಕದ ಕೊಡಗು ಜಿಲ್ಲಾ ಸಮಿತಿಗೆ ನೇಮಕಗೊಂಡ ನೂತನ ಪದಾಧಿಕಾರಿಗಳಿಗೆ ಘಟಕದ ರಾಜ್ಯಾಧ್ಯಕ್ಷ ಅಜ್ಜಿಕುಟ್ಟಿರ ಪೊನ್ನಣ್ಣ ನೇಮಕಾತಿ ಪತ್ರ ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾಗಿ ದೇವಲಿಂಗಯ್ಯ, ಎನ್.ಜಿ. ಅಯ್ಯಪ್ಪ, ಖಜಾಂಚಿಯಾಗಿ ಸುದಯ್ ನಾಣಯ್ಯ, ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗದ ಉಪಾಧ್ಯಕ್ಷೆಯಾಗಿ ಕಡೇಮಾಡ ಕುಸುಮಾ ಜೋಯಪ್ಪ ನೇಮಕ ಗೊಂಡರು ಕಾನೂನು ಘಟಕದ ಅಧ್ಯಕ್ಷರಾಗಿ ಶ್ರೀಧರನ್ ನಾಯರ್ ಅವರನ್ನು ಈ ಹಿಂದೆಯೇ ನೇಮಕಗೊಳಿಸಲಾಗಿದೆ.
ಬಳಿಕ ಮಾತನಾಡಿದ ಪೊನ್ನಣ್ಣ ಅವರು, ರಾಜಕೀಯ ಹೋರಾಟ ಅಲ್ಲದೆ ಕಾನೂನು ಹೋರಾಟ ಕೂಡ ಮುಖ್ಯವಾಗಿದೆ. ಕಾನೂನು ಬಾಹಿರ ಚಟುವಟಿಕೆ ಎದುರಿಸಲು ದೃಢವಾದ ಸಂಘಟನೆ ಇರಬೇಕು. ಜಿಲ್ಲಾ ಕಾಂಗ್ರೆಸ್‌ಗೆ ಬೆಂಬಲವಾಗಿ ಕಾನೂನು ಘಟಕ ಕೆಲಸ ಮಾಡುತ್ತಿದೆ. ಬ್ಲಾಕ್ ಮಟ್ಟದಲ್ಲಿ ಸಮಿತಿ ರಚಿಸಲಾಗುತ್ತದೆ. ಪಕ್ಷ ಹಾಗೂ ಕಾರ್ಯಕರ್ತರ ರಕ್ಷಣೆಯೇ ಘಟಕದ ಉದ್ದೇಶವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಪಕ್ಷದ ಕಾರ್ಯಕರ್ತರ ಶಕ್ತಿಯಾಗಿ ಘಟಕ ಕೆಲಸ ಮಾಡುತ್ತಿದೆ. ನೈಜ ಕಾರ್ಯಕರ್ತತನ್ನು ಪಕ್ಷ ಗುರುತಿಸುತ್ತದೆ. ಕೆಲಸ ಮಾಡುವರಿಗೆ ಪಕ್ಷದಲ್ಲಿ ಸ್ಥಾನಮಾನ ಖಂಡಿತ ಲಭಿಸುತ್ತದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಮಾತನಾಡಿ, ಮುಖಂಡರು ಅಥವಾ ನಾಯಕರು ಪಕ್ಷಕ್ಕೆ ಚ್ಯುತಿ ತರುವ ಕೆಲಸ ಮಾಡಬಾರದು ಎಂದು ಕರೆ ನೀಡಿದರು.
ಈ ಸಂದರ್ಭ ಘಟಕದ ರಾಜ್ಯ ಉಪಾಧ್ಯಕ್ಷ ವೆಂಕಟೇಶ್, ಜಿಲ್ಲಾಧ್ಯಕ್ಷ ಶ್ರೀಧರನ್ ನಾಯರ್, ಕಿಸಾನ್ ಘಟಕದ ಅಧ್ಯಕ್ಷ ನೆರವಂಡ ಉಮೇಶ್, ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕ ಸೂರಜ್ ಹೊಸೂರು ಸೇರಿದಂತೆ ಇನ್ನಿತರರು ಹಾಜರಿದ್ದರು.