ಕಣಿವೆ, ಜು. ೧೬: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ನಾಗರಿಕರಿಗೆ ೨೦೧೯-೨೦ನೇ ಸಾಲಿನ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸಲು ಬೈಚನಹಳ್ಳಿ ಕಾವೇರಿ ನದಿಯ ಜಾಕ್‌ವೆಲ್ ಬಳಿ ರೂ. ೯.೮೦ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮರಳು ಚೀಲದ ತಡೆಗೋಡೆ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಪಂಚಾಯಿತಿ ಸದಸ್ಯರುಗಳು ಆರೋಪ ಮಾಡಿದ ಪ್ರಸಂಗ ಎದುರಾಯಿತು.
ಶುಕ್ರವಾರ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಜಯವರ್ಧನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಮಾ ಖರ್ಚುಗಳ ವಿವರವಾಗಿ ಚರ್ಚಿಸುತ್ತಿದ್ದ ಸಂದರ್ಭ ಈ ವಿಚಾರವನ್ನು ಚರ್ಚೆಗೊಳಪಡಿಸಿದ ಸದಸ್ಯ ನಾರಾಯಣ, ಆಡಳಿತಾಧಿಕಾರಿಗಳ ಆಡಳಿತವಿದ್ದ ಸಂದರ್ಭ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಗಂಭೀರ ಚರ್ಚೆಯಾಗಬೇಕು. ಮತ್ತೆ ೨೦೨೦-೨೧ರ ಸಾಲಿಗೆ ಮತ್ತೆ ಅದೇ ಮರಳು ಚೀಲದ ತಡೆಗೋಡೆ ಕಾಮಗಾರಿಗೆ ಟೆಂಡರು ಕರೆದಿದ್ದು ೨೦೧೯ರಲ್ಲಿ ಮರಳು ಚೀಲ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಮತ್ತೆ ಅದೇ ಕಾಮಗಾರಿಯನ್ನು ನೀಡಲು ಹೊರಟಿರುವ ಹುನ್ನಾರದ ಬಗ್ಗೆ ತನಿಖೆಯಾಗಬೇಕು ಎಂದು ನಾರಾಯಣ ಒತ್ತಾಯಿಸಿದರು.
ಸದಸ್ಯ ಡಿ.ಕೆ. ತಿಮ್ಮಪ್ಪ, ಬಿ. ಅಮೃತರಾಜು ಹಾಗೂ ವಿ.ಎಸ್. ಆನಂದಕುಮಾರ್ ಕೂಡ ಈ ವಿಚಾರವನ್ನು ಅಧ್ಯಕ್ಷರು ಗಂಭೀರವಾಗಿ ಪರಿಗಣಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು. ಅಭಿಯಂತರೆ ಶ್ರೀದೇವಿ ಪ್ರತಿಕ್ರಿಯಿಸಿ ಜಲಮಂಡಳಿ ಕಳುಹಿಸಿದ ಕ್ರಿಯಾ ಯೋಜನೆ ಪ್ರಕಾರ ಮೂರೂವರೆ ಮೀಟರ್ ಮರಳು ಚೀಲದ ಕಾಮಗಾರಿ ಮಾಡಿದ್ದೇವೆ ಎಂದರು.
ಬಳಿಕ ಸಭಾಧ್ಯಕ್ಷ ಜಯವರ್ಧನ ಕೋರಿಕೆ ಮೇರೆಗೆ ಜಲಮಂಡಳಿ ಅಭಿಯಂತರ ಆನಂದ್ ಸಭೆಗೆ ಆಗಮಿಸಿ ಕುಡಿಯುವ ನೀರಿನ ಕಾಮಗಾರಿ ನಿರ್ವಹಿಸಲು ಜಲ ಮಂಡಳಿಗೆ ಪೂರಕವಾದ ಅನುದಾನ ವನ್ನು ಪಂಚಾಯಿತಿ ಕಡೆಯಿಂದ ಭರಿಸಲು ಕೋರಿಕೆ ಸಲ್ಲಿಸಲಾಗಿತ್ತು. ಅಷ್ಟರಲ್ಲಿ ನಮ್ಮ ಗಮನಕ್ಕೆ ಬಾರದೇ ಪಂಚಾಯಿತಿಯಿAದಲೇ ಈ ಕಾಮಗಾರಿ ಮಾಡಿದ್ದಾರೆ. ಆದರೆ ಕಾಮಗಾರಿ ವಿವರವಾಗಲೀ, ಗುಣಮಟ್ಟದ ಬಗ್ಗೆ ಜಲಮಂಡಳಿ ಜವಾಬ್ದಾರಿಯಲ್ಲ ಎಂದರು.
ಕಾವೇರಿ ನದಿಯೊಳಗೆ ಮೂರೂವರೆ ಮೀಟರ್ ಎತ್ತರದಲ್ಲಿ ಮರಳು ಚೀಲದ ತಡೆಗೋಡೆ ಕಾಮಗಾರಿ ಮಾಡಿರುವ ಬಗ್ಗೆ ಪಂಚಾಯಿತಿ ಅಭಿಯಂತರೆ ಹೇಳುತ್ತಾರೆ. ಆತ್ಮಸಾಕ್ಷಿಯಿಂದ ಸಭೆಗೆ ಉತ್ತರಿಸಿ. ಸಾರ್ವಜನಿಕರ ಹಣವನ್ನು ಮನಬಂದAತೆ ವ್ಯಯಮಾಡಿರುವುದು ಸರಿಯೇ ಎಂದು ಸದಸ್ಯರು ಅಭಿಯಂತರೆಯನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ಕುಡಿಯುವ ನೀರಿಗೆ ಮರಳು ಚೀಲದ ತಡೆಗೋಡೆ ಕಾಮಗಾರಿಯನ್ನು ಜಲಮಂಡಳಿಯೇ ನಿರ್ವಹಿಸಲಿ. ಪಂಚಾಯಿತಿ ಹಣವನ್ನು ಪೋಲು ಮಾಡುವದಿಲ್ಲ ಎಂದು ಸಭಾಧ್ಯಕ್ಷ ಜಯವರ್ಧನ ಹೇಳುವ ಮೂಲಕ ವಿಚಾರಕ್ಕೆ ಅಂಕಿತ ಹಾಕಿದರು.
ಪಂಚಾಯಿತಿಯ ಸಕ್ಕಿಂಗ್ ಯಂತ್ರದ ಮೂಲಕ ತಿಂಗಳಿಗೆ ಕೇವಲ ಏಳೂವರೆ ಸಾವಿರ ವರಮಾನ ಬಂದಿರುವ ಬಗ್ಗೆ ಮಾಹಿತಿ ಕೊಟ್ಟಿದ್ದೀರಾ. ಅಂದರೆ ಕುಶಾಲನಗರದಲ್ಲಿ ಯಾರೂ ಕೂಡ ಸಕ್ಕಿಂಗ್ ಯಂತ್ರ ಬಳಸುತ್ತಿಲ್ಲವೇ? ಈ ವಿಚಾರವಾಗಿಯೂ ಅಕ್ರಮ ನಡೆಯುತ್ತಿದೆ ಅಧ್ಯಕ್ಷರು ಗಮನ ಹರಿಸಿ ಎಂದು ಸದಸ್ಯ ಬಿ. ಅಮೃತರಾಜು ಹೇಳಿದರು.
ಪಂಚಾಯಿತಿಯ ಕಚೇರಿಯಲ್ಲಿ ಬಹು ಮುಖ್ಯವಾದ ಕಡತಗಳು ಕಾಣೆಯಾಗಿವೆ. ದಾಖಲೆಗಳು ಇರುವವರಿಂದ ಸಂಗ್ರಹಿಸಿಡುವ ಕೆಲಸ ವಾಗಬೇಕು. ಅಥವಾ ಈ ಬಗ್ಗೆ ನುರಿತ ವಕೀಲರಿಂದ ಕಾಣೆ ಯಾಗಿರುವ ದಾಖಲೆಗಳನ್ನು ಪುನಃ ಹೊಸದಾಗಿ ಮಾಡಬೇಕು. ಅಲ್ಲದೇ ಪಂಚಾಯಿತಿ ಕಚೇರಿಯ ಒಳಗೆ ದಾಖಲಾತಿಗಳಿಗೆ ಸಂಬAಧಿಸಿದAತೆ ಪ್ರತ್ಯೇಕ ಕೊಠಡಿಯನ್ನು ನಿರ್ಮಿಸಿಡಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಖಾಸಗಿ ಬಸ್ ನಿಲ್ದಾಣವನ್ನು ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಿಸಿದ್ದರೂ ಕೂಡ ಉಪಯೋಗಕ್ಕೆ ಬರುತ್ತಿಲ್ಲ. ಕೋಟಿಗಟ್ಟಲೆ ಹಣ ವ್ಯಯ ಮಾಡಿ ನಿರ್ಮಿಸಿರುವ ಕಲಾಭವನ ಕಾಮಗಾರಿಯೂ ಕೂಡ ಪೂರ್ಣಗೊಂಡಿಲ್ಲ. ಈ ಬಗ್ಗೆ ಅಧ್ಯಕ್ಷರು ಹೆಚ್ಚಿನ ಶ್ರಮ ವಹಿಸಬೇಕು ಎಂದು ಸದಸ್ಯ ನಾರಾಯಣ ಹೇಳಿದರು. ಪಂಚಾಯಿತಿ ಉಪಾಧ್ಯಕ್ಷೆ ಸುರಯ್ಯಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ. ಸುರೇಶ್, ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಸೇರಿದಂತೆ ಪಂಚಾಯಿತಿಯ ವಿವಿಧ ವಾರ್ಡುಗಳ ಸದಸ್ಯರಿದ್ದರು. -ಮೂರ್ತಿ