ಸೋಮವಾರಪೇಟೆ, ಜು.೧೪: ವಿದ್ಯುತ್ ಇಲಾಖೆಗೆ ೪೮ ಲಕ್ಷ ಬಿಲ್ ಕಟ್ಟಲು ಬಾಕಿ ಇದೆ ಎಂಬ ಕಾರಣವೊಡ್ಡಿ ಮನೆ ಮುಂದೆ ಇದ್ದ ಸಾರ್ವಜನಿಕ ಬೀದಿ ದೀಪದ ಬಲ್ಬ್ನ್ನು ತೆರವುಗೊಳಿಸಿರುವ ಚೌಡ್ಲು ಗ್ರಾಮ ಪಂಚಾಯಿತಿಯ ಕ್ರಮಕ್ಕೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೇಕಟ್ಟೆ ರಸ್ತೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಅಳವಡಿಸಿದ್ದ ಬೀದಿ ದೀಪಗಳನ್ನು ದಿಢೀರನೇ ತೆರವುಗೊಳಿಸಿದ್ದು, ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದು ಸ್ಥಳೀಯ ನಿವಾಸಿಗಳಾದ ಹೆಚ್.ಎಂ. ಬೋಜೇಗೌಡ, ಎನ್.ಎ. ಗಣೇಶ್, ಹರ್ಷಿತ್, ಉದಯಕುಮಾರ್, ಆಕಾಶ್ ಅವರುಗಳು ಆರೋಪಿಸಿದ್ದಾರೆ.

ಪಂಚಾಯಿತಿಯ ವಿದ್ಯುತ್ ಬಿಲ್ ೪೮ ಲಕ್ಷವಾಗಿದೆ ಎಂಬ ಕಾರಣ ನೀಡಿ ಕಂಬದಲ್ಲಿದ್ದ ಬಲ್ಬ್ ತೆಗೆದಿದ್ದಾರೆ. ತಕ್ಷಣ ಬಲ್ಬ್ ಹಾಕಬೇಕು; ತಪ್ಪಿದಲ್ಲಿ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಬೋಜೇಗೌಡ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಭಾಗದಲ್ಲಿ ಕಳೆದ ಹತ್ತು ವರ್ಷ ಗಳಿಂದ ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ರಸ್ತೆಗಳಿಗೆ ಚರಂಡಿ ವ್ಯವಸ್ಥೆಯಿಲ್ಲದೆ, ಅನೇಕ ಕಡೆ ಕೊಳಚೆ ನೀರು ಮತ್ತೊಬ್ಬರ ಅಂಗಳದಲ್ಲಿ ಹರಿಯುತ್ತಿದೆ ಎಂದು ಆರೋಪಿಸಿದರು.

ಅತೀ ಹೆಚ್ಚು ಆದಾಯ ಬರುವ ಪಂಚಾಯಿತಿ ಇದಾಗಿದ್ದು, ವಾರ್ಡ್ ಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ಕೊಟ್ಟ ಸೌಲಭ್ಯಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಸರಿಯಾದ ರಸ್ತೆಯಿಲ್ಲದೆ, ಆಂಬುಲೆನ್ಸ್ ಹಾಗು ಗ್ಯಾಸ್ ಸರಬರಾಜು ವಾಹನಗಳು ಮನೆ ಹತ್ತಿರ ಬರುತ್ತಿಲ್ಲ. ಅನಾರೋಗ್ಯ ಪೀಡಿತರನ್ನು ಮುಖ್ಯರಸ್ತೆಗೆ ಹೊತ್ತುಕೊಂಡು ಬರಬೇಕಿದೆ. ಕೆಲ ಮನೆಗಳು ಕೂಡ ಗಾಳಿ ಮಳೆಗೆ ಕುಸಿಯುವ ಭೀತಿ ಎದುರಾಗಿದೆ. ಅನಾಹುತವಾದರೆ ಚೌಡ್ಲು ಪಂಚಾಯಿತಿ ಅಧಿಕಾರಿಗಳು ಹೊಣೆಯಾಗಬೇಕು. ಎಲ್ಲಾ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಹೇಳಿದರು.