ಮಡಿಕೇರಿ, ಜು. ೧೪: ಮಡಿಕೇರಿ ಬ್ಲಾಕ್ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಕೊಟ್ಟಮುಡಿಯ ಕಾಫಿ ಬೆಳೆಗಾರ ಹೆಚ್. ಎ. ಹಂಸ ಅವರನ್ನು ಕೆಪಿಸಿಸಿ ಅವಿರೋಧವಾಗಿ ನೇಮಕಗೊಳಿಸಿದೆ.
ಹಂಸ ಸೇರಿದಂತೆ ಡಿಸಿಸಿ ಕಾರ್ಯಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ನೇತೃತ್ವದ ಕೊಡಗು ಕಾಂಗ್ರೆಸ್ ಪ್ರಮುಖರ ತಂಡವನ್ನು ಬೆಂಗಳೂರಿಗೆ ಕರೆಸಿಕೊಂಡ ಕೆಪಿಸಿಸಿ ನಾಯಕರು, ಕಾರ್ಯಾಧ್ಯಕ್ಷರ ಸಮ್ಮುಖದಲ್ಲಿ ಹಂಸ ಅವರಿಗೆ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚನೆಯಂತೆ ನೇಮಕಾತಿ ಆದೇಶ ಪತ್ರವನ್ನು ಕೆಪಿಸಿಸಿ ಪರವಾಗಿ ಹಂಸ ಅವರಿಗೆ ವಿತರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು, ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡಿ ಕಾಂಗ್ರೆಸನ್ನು ಮತ್ತಷ್ಟು ಬಲಪಡಿಸುವಂತೆ ಸೂಚಿಸಿದ್ದಾರೆ.
ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾ.ಪಂ. ಸದಸ್ಯರಾಗಿರುವ ಹೆಚ್. ಎ. ಹಂಸ ಅವರು, ಕಳೆದ ೨೫ ವರ್ಷಗಳಿಂದ ಸತತವಾಗಿ ಗ್ರಾ.ಪಂ. ಸದಸ್ಯರಾಗಿ ಚುನಾಯಿ ಸಲ್ಪಟ್ಟಿದ್ದು, ಇದೀಗ ೫ನೇ ಬಾರಿಗೆ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿ ದ್ದಾರೆ. ೨೦೦೯ -೧೦ರಲ್ಲಿ ಹೊದ್ದೂರು ಗ್ರಾ.ಪಂ.ಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಹಂಸ ಅವರು ೨೦೧೧ರಿಂದ ೨೦೧೩ ರವರೆಗೆ ಹೊದ್ದೂರು ಗ್ರಾ.ಪಂ. ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ)ಯ ಉಪಾಧ್ಯಕ್ಷರಾಗಿ, ಕೊಡಗು ಜಿ.ಪಂ. ಕೆಡಿಪಿ ಸದಸ್ಯರಾಗಿ, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾಗಿ, ಹೊದವಾಡದ ಜ್ಹಿನತ್ ಯುವಕ ಸಂಘದ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯನಿರ್ವಹಿಸಿರುವ ಹಂಸ ಅವರು ಪ್ರಸ್ತುತ ಕೊಡವ ಮುಸ್ಲಿಂ ಅಸೋಸಿಯೇಷನ್(ಕೆ. ಎಂ. ಎ)ನ ಕೋಶಾಧಿಕಾರಿಯಾಗಿ, ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಮತ್ತು ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಂಸ ಅವರು ನೇಮಕಾತಿ ಆದೇಶ ಪತ್ರ ಪಡೆದ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮಾಜಿ ಸಂಸದ ಧ್ರುವನಾರಾಯಣ್, ಕೆಪಿಸಿಸಿ ಮುಖಂಡ ಮೆಹರೋಜ್ಹ್ ಖಾನ್, ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಕೆ. ಎಂ. ಅಬ್ದುಲ್ ರಹಿಮಾನ್, ಜಿ. ಪಂ. ಮಾಜಿ ಸದಸ್ಯ ಬಿ.ಎನ್. ಪ್ರಥ್ಯು, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ ಹ್ಯಾರಿಸ್ ಕೊಳಕೇರಿ, ಮುಖಂಡ ಕಾವೇರಪ್ಪ ಹಾಜರಿದ್ದರು.