ಚೆಯ್ಯಂಡಾಣೆ, ಜು. ೧೪: ಚೆಯ್ಯಂಡಾಣೆ ಸಮೀಪದ ಕೋಕೇರಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ದಾಂಧಲೆ ಮುಂದುವರಿಸಿದ್ದು, ಚೇರುವಾಳಂಡ, ಬಿದ್ದಂಡ, ಮಾಚ್ಚಂಡ, ಚಂಡಿರ ಕುಟುಂಬಸ್ಥರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆ ಕಾಫಿ, ಅಡಿಕೆ, ಬಾಳೆ, ಕರಿಮೆಣಸು ಹಾಗೂ ನಾಟಿ ಮಾಡಲು ತಯಾರಾಗಿದ್ದ ಗದ್ದೆಗಳನ್ನು ತುಳಿದು ನಾಶಗೊಳಿಸಿವೆ.

ಗ್ರಾಮಸ್ಥರಾದ ಚೇರುವಾಳಂಡ ಪೂಣಚ್ಚ, ಕೆ.ಎಸ್. ಗೋಪಾಲ ಕೃಷ್ಣ ಹಾಗೂ ಚಂಡಿರ ಲವೀನ್ ಅವರ ಸುಮಾರು ೬೦ಕ್ಕೂ ಹೆಚ್ಚು ಕಾಫಿ ಗಿಡ ಹಾಗೂ ಕರಿಮೆಣಸುಗಿಡಗಳನ್ನು ಕಾಡಾನೆ ನಾಶ ಪಡಿಸಿದೆ. ಅರಣ್ಯ ಇಲಾಖೆ ಕೂಡಲೇ ಕ್ರಮಕೈಗೊಂಡು ಕಾಡಾನೆಯನ್ನು ಕಾಡಿಗಟ್ಟಿ ನೊಂದ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವರದಿ: ಅಶ್ರಫ್ ಚೆಯ್ಯಂಡಾಣೆ