ಗೋಣಿಕೊಪ್ಪಲು, ಜು. ೧೪: ವಾಣಿಜ್ಯ ನಗರ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ, ಖಾಸಗಿ ಹಾಗೂ ಸರ್ಕಾರಿ ಬಸ್‌ಗಳಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಇದೀಗ ಬಸ್‌ಗಳು ನಿಲುಗಡೆ ಯಾಗಬೇಕಾದ ಜಾಗವನ್ನು ಇತರ ಖಾಸಗಿ ವಾಹನಗಳಾದ ಜೀಪು, ಕಾರು, ಆಟೋ ರಿಕ್ಷಾ, ವ್ಯಾನ್ ದ್ವಿಚಕ್ರ ವಾಹನಗಳು ಆಕ್ರಮಿಸಿ ಕೊಂಡಿವೆ. ಅಲ್ಲದೆ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆಯಲ್ಲಿಯೇ ಪ್ಲಾಸ್ಟಿಕ್ ಮಾರಾಟದ ಅಂಗಡಿಗಳು, ಕೊಡೆ ಅಂಗಡಿಗಳು ನಾಯಿಕೊಡೆಗಳಂತೆ ತಲೆಎತ್ತಿವೆ.

ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿವೆ. ನಿಲುಗಡೆಯಾಗಿರುವ ಬಸ್‌ನ ಹಿಂಭಾಗ ಹಾಗೂ ಮುಂಭಾಗದಲ್ಲಿ ಖಾಸಗಿ ವಾಹಗಳನ್ನು ನಿಲ್ಲಿಸಿ ವಾಹನ ಮಾಲೀಕರು, ಚಾಲಕರು ತಮ್ಮ ಕೆಲಸಕ್ಕೆ ತೆರಳುತ್ತಿದ್ದಾರೆ. ಇದರಿಂದಾಗಿ ಬಸ್‌ಗಳು ನಿಗದಿತ ಸಮಯದಲ್ಲಿ ನಿಲ್ದಾಣ ಬಿಡಲು ಸಾಧ್ಯವಾಗುತ್ತಿಲ್ಲ. ಪ್ರಯಾಣಿಕರಿಗೂ ಕೂಡ ನಿಲ್ದಾಣದಲ್ಲಿರುವ ಬಸ್‌ಗಳಿಗೆ ತೆರಳಲು ಅಡ್ಡಿಯಾಗುತ್ತಿವೆ.

ಕಳೆದ ಕೆಲವು ದಿನಗಳಿಂದ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ಓಡಾಟ ಆರಂಭವಾಗಿದೆ. ಕೊರೊನಾ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರವಿಲ್ಲದ ಕಾರಣ ನಿಲ್ದಾಣದ ಖಾಲಿ ಜಾಗದಲ್ಲಿ ಇತರ ವಾಹನಗಳಿಗೆ ನಿಲುಗಡೆಗೆ ಅವಕಾಶ ನೀಡಲಾಗಿತ್ತು. ಇದೀಗ ಬಸ್ ಸಂಚಾರ ಗೊಂಡರೂ ನಿಲ್ದಾಣದಲ್ಲಿಯೇ ಖಾಸಗಿ ವಾಹನಗಳು ಪಾರ್ಕಿಂಗ್ ಮಾಡುತ್ತಿವೆ.

- ಹೆಚ್.ಕೆ. ಜಗದೀಶ್