ಮಡಿಕೇರಿ: ಎಡೆಬಿಡದೆ ಸುರಿಯುತ್ತಿರುವ ಗಾಳಿ - ಮಳೆಗೆ ಮಡಿಕೇರಿ ಆಕಾಶವಾಣಿ ಕೇಂದ್ರದ ಗೋಪುರ (ಟವರ್) ಕೆಳಭಾಗದಲ್ಲಿ ಭೂಕುಸಿತ ವುಂಟಾಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಸ್ಟೋನ್ ಹಿಲ್ ಕಡೆಗೆ ತೆರಳುವ ರಸ್ತೆಗೆ ಹೊಂದಿಕೊAಡಿರುವ ಜಾಗದಲ್ಲಿ ಭೂಕುಸಿತ ಉಂಟಾಗಿದ್ದು, ಇನ್ನಷ್ಟು ಕುಸಿತಗೊಂಡಲ್ಲಿ ಗೋಪುರ ಬಿದ್ದು ಭಾರೀ ಅನಾಹುತ ಉಂಟಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಕಳೆದ ೨೦೧೮ರಲ್ಲಿ ಭಾರೀ ಮಳೆಗೆ ಗೋಪುರದ ಬಳಿ ಭೂಕುಸಿತ ಉಂಟಾಗಿತ್ತು. ನಂತರದಲ್ಲಿ ಅಲ್ಲಿಗೆ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಆದರೆ ಇದೀಗ ಗೋಪುರದ ಬಳಿಯಿಂದಲೇ ಕುಸಿದಿದೆ. ಕುಸಿತಗೊಂಡಿರುವ ಭಾಗದಲ್ಲಿ ತಡೆಗೋಡೆ ನಿರ್ಮಿಸದೆ ಹಾಗೇ ಬಿಟ್ಟಿದ್ದರಿಂದ ಇದೀಗ ಅಲ್ಲಿ ಕುಸಿತಗೊಂಡಿದೆ. ಪ್ರಸ್ತುತ ಜಾಗ ನೋಡಿದಲ್ಲಿ ಅಪಾಯದ ಮಟ್ಟದಲ್ಲಿದೆ.

(ಮೊದಲ ಪುಟದಿಂದ) ಸ್ಥಳಕ್ಕೆ ನಗರಸಭೆ ಆಯುಕ್ತ ರಾಮದಾಸ್ ಭೇಟಿ ನೀಡಿ ಪರಿಶೀಲನೆ ಮಾಡಿದರಲ್ಲದೆ, ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸುವ ಸಲುವಾಗಿ ಪೊಲೀಸ್ ಇಲಾಖೆ ಮೂಲಕ ಕ್ರಮ ಕೈಗೊಂಡಿದ್ದಾರೆ. ರಸ್ತೆಗಡ್ಡಲಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ.

ಕೂರ್ಗ್ ವಿಲೇಜ್‌ಗೆ ಮರ

ಇತ್ತ ರಾಜಾಸೀಟ್ ಬಳಿ ಇರುವ ನೂತನವಾಗಿ ನಿರ್ಮಿಸಲಾಗಿರುವ ಕೂರ್ಗ್ ವಿಲೇಜ್‌ನ ಬೇಲಿ ಬದಿಯಲ್ಲಿದ್ದ ಬೃಹತ್ ಗಾತ್ರದ ಸಿಲ್ವರ್ ಮರ ಉರುಳಿ ಬಿದ್ದಿದೆ. ಕೂರ್ಗ್ ವಿಲೇಜ್ ಆವರಣದೊಳಕ್ಕೆ ಮರ ಬಿದ್ದಿದ್ದು, ಬೇಲಿಗೆ ಹಾನಿಯಾಗಿದೆ.