ವೀರಾಜಪೇಟೆ, ಜು. ೧೩: ವೀರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಯಾಗಿ ಎ. ಚಂದ್ರಕುಮಾರ್ ಪ್ರಬಾರ ಮುಖ್ಯಾಧಿಕಾರಿ ಹೇಮಕುಮಾರ್ ಅವರಿಂದ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಮುಖ್ಯಾಧಿಕಾರಿಯಾಗಿದ್ದ ಎ.ಎಂ. ಶ್ರೀಧರ್ ಅವರು ಮೈಸೂರಿನ ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಪ್ರಬಾರ ಮುಖ್ಯಾಧಿಕಾರಿಯಾಗಿ ಹೇಮಕುಮಾರ್ ಕಾರ್ಯ ನಿರ್ವಹಿಸುತ್ತಿದ್ದರು. ಚಂದ್ರಕುಮಾರ್ ಅವರು ಪಿರಿಯಾಪಟ್ಟಣ, ನಾಗಮಂಗಲ, ಸುಳ್ಯದಲ್ಲಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಯಾವುದೇ ಕೆಲಸ ನಿರ್ವಹಿಸಬೇಕಾದರೆ ಉದ್ದೇಶ ಹಾಗೂ ನಿರ್ಧಿಷ್ಟ ಗುರಿ ಹೊಂದಿರಬೇಕು. ಪಟ್ಟಣದಲ್ಲಿನ ೪ ವಾರ್ಡ್ಗಳು ಬೆಟ್ಟ ಪ್ರದೇಶಗಳಿಂದ ಕೂಡಿದ್ದು, ಸಾರ್ವಜನಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪಟ್ಟಣದ ಭೌಗೋಳಿಕ ಹಿನ್ನೆಲೆಯನ್ನು ತಿಳಿದುಕೊಂಡು ಸದಸ್ಯರು, ಸಿಬ್ಬಂದಿಗಳು ಹಾಗು ಸಾರ್ವಜನಿಕರನ್ನು ಗಣನೆಗೆ ತೆಗೆದುಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ಹೇಳಿದರು.

ಅಧಿಕಾರ ಸ್ವೀಕಾರ ಸಂದರ್ಭ ಅಧ್ಯಕ್ಷೆ ಸುಶ್ಮಿತಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀತಾ, ಸದಸ್ಯರುಗಳಾದ ದೇಚಮ್ಮ ಕಾಳಪ್ಪ, ಮತೀನ್, ಸಿ.ಕೆ ಪೃಥ್ವಿನಾಥ್, ಆಶಾ ಸುಬ್ಬಯ್ಯ, ಅನಿತಾ, ರಂಜಿ ಪೂಣಚ್ಚ, ರಾಜೇಶ್ ಪದ್ಮನಾಭ, ರಜನಿಕಾಂತ್, ಅಭಿಯಂತರ ಹೇಮಕುಮಾರ್ ಉಪಸ್ಥಿತರಿದ್ದರು.