ವೀರಾಜಪೇಟೆ, ಜು. ೧೩: ವೀರಾಜಪೇಟೆ ತಾಲೂಕಿನ ಕುಂದ-ಕುಕ್ಲೂರು ಗ್ರಾಮದಲ್ಲಿ ಲಸಿಕೆ ಅಭಿಯಾನ ಮಾಡುವಂತೆ ಕೋರಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ ಅವರಿಗೆ ಮನವಿ ಸಲ್ಲಿಸಿದ್ದಾರೆ. ತಹಶೀಲ್ದಾರ್ ಪರವಾಗಿ ಶಿರಸ್ತೇದಾರ್ ಸಂಜೀವ್ ಕುಮಾರ್ ಮನವಿ ಸ್ವೀಕರಿಸಿದರು.

ದಲಿತ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಹೆಚ್.ಆರ್. ಶಿವಣ್ಣ ಅವರ ಮುಂದಾಳತ್ವದಲ್ಲಿ ಮನವಿ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಕುಂದ-ಕುಕ್ಲೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನಿವಾಸಿಗಳು ಹೆಚ್ಚು ಇರುವುದರಿಂದ ಇವರೆಲ್ಲ ಕಾರ್ಮಿಕರಾಗಿದ್ದು, ಇವರಿಗೆ ಬೇರೆ ವರಮಾನವೇ ಇಲ್ಲದಿರುವುದರಿಂದ ಕೋವಿಡ್-೧೯ ಲಸಿಕೆ ಪಡೆದುಕೊಳ್ಳಲು ೧೦ ರಿಂದ ೧೫ ಕಿ.ಮೀ. ದೂರ ಕಾಕೋಟುಪರಂಬುಗೆ ನಡೆದು ಹೋಗಬೇಕಾಗಿದೆ. ಇಲ್ಲಿ ಯಾರಿಗೂ ಸ್ವಂತ ವಾಹನಗಳಿಲ್ಲ. ಆದ್ದರಿಂದ ಗ್ರಾಮಕ್ಕೆ ಬಂದು ಲಸಿಕೆ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಮನವಿ ಸಲ್ಲಿಸುವ ಸಂದರ್ಭ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಹೆಚ್.ಜಿ. ಗೋಪಾಲ, ತಾಲೂಕು ಸಂಚಾಲಕ ಹೆಚ್.ಪಿ. ಲವ, ಗ್ರಾಮ ಸಂಚಾಲಕ ಹೆಚ್.ಕೆ. ವಿದ್ಯಾಧರ, ಸದಸ್ಯರಾದ ಮೋಹನ್, ಹೆಚ್.ಎಂ. ರಮೇಶ್, ಅನಿಲ್ ಇತರರು ಹಾಜರಿದ್ದರು.