ಶ್ರೀಮಂಗಲ, ಜು. ೧೩: ಕೊಡಗು ಜಿಲ್ಲೆಯಲ್ಲಿ ಕೃಷಿ ಭೂಮಿ ಮತ್ತು ಕಾಫಿ ತೋಟದ ಜಾಗದಲ್ಲಿ ತಮ್ಮ ಸ್ವಂತ ಮನೆ ನಿರ್ಮಾಣ ಕಾಮಗಾರಿ ಹೊರತುಪಡಿಸಿ, ಇತರ ಯಾವುದೇ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡುವುದನ್ನು ತಡೆ ಮಾಡಲು ಕೋರಿ ಹೈಕೋರ್ಟ್ನಲ್ಲಿ ದಾವೆ ಹೂಡಲಾಗಿದೆ ಎಂದು ಕೊಡಗು ಸಂರಕ್ಷಣಾ ವೇದಿಕೆಯ ಪ್ರಮುಖರು ತಿಳಿಸಿದ್ದಾರೆ.

ಈ ಬಗ್ಗೆ ವೇದಿಕೆಯ ಅಧ್ಯಕ್ಷ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆ ಯಲ್ಲಿ ನಡೆದ ತುರ್ತು ಸಭೆಯಲ್ಲಿ ವಿಷಯ ತಿಳಿಸಿದರು. ಈ ದಾವೆಗೆ ಬಲ ನೀಡಲು ಕೊಡಗು ಜಿಲ್ಲಾಧಿಕಾರಿಗಳಿಗೆ ವಕೀಲರಿಂದ ಕಾನೂನು ನೋಟೀಸ್ ಜಾರಿ ಮಾಡಲಾಗಿದೆ. ಕಾನೂನು ವ್ಯಾಪ್ತಿಯಲ್ಲಿ ನಮಗೆ ನ್ಯಾಯಾಲಯ ಮತ್ತು ಜಿಲ್ಲಾಧಿಕಾರಿಗಳ ಮೂಲಕ ನ್ಯಾಯ ಸಿಗುವ ಎಲ್ಲಾ ವಿಶ್ವಾಸ ಇದೆ ಎಂದರು. ಕೋವಿಡ್-೧೯ ಸಾಂಕ್ರಾಮಿಕ ಸೋಂಕು ಹಿನ್ನೆಲೆ ಹೆಚ್ಚಿನ ಜನ ಸೇರಿ ಪ್ರತಿಭಟನೆ ಮಾಡುವುದು ಸೂಕ್ತವಲ್ಲ.

(ಮೊದಲ ಪುಟದಿಂದ) ಇದರಿಂದಲೇ ನಾವು ಸಹ ಪ್ರತಿಭಟನೆಗಳನ್ನು ಕೈಬಿಟ್ಟು ಕಾನೂನು ಮೊರೆ ಹೋಗಿದ್ದು ಹಾಗೂ ಜಿಲ್ಲಾಧಿಕಾರಿಗಳಿಂದ ಸೂಕ್ತ ಕ್ರಮಕ್ಕೆ ಈ ಮೂಲಕ ಮನವಿ ಮಾಡುತ್ತೇವೆ ಎಂದರು.

ಜಿಲ್ಲೆಯಲ್ಲಿ ಕೃಷಿ ಭೂಮಿ, ಕಾಫಿ ತೋಟ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡುವ ದಂಧೆ ನಡೆಯುತ್ತಿದೆ. ಹಾಗೆಯೇ ಜಿಲ್ಲೆಯಲ್ಲಿ ವನ್ಯಜೀವಿ ಹಾವಳಿ ಬಹಳಷ್ಟು ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಮತ್ತು ವನ್ಯಜೀವಿ ನುಸುಳು ತಡೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಕೊಡಗಿನ ಅರಣ್ಯ ಸರಹದ್ದು ಕೇವಲ ಅಂದಾಜು ೨೮೦ ಕಿ.ಮೀ. ವ್ಯಾಪ್ತಿ ಹೊಂದಿದ್ದು, ಈ ವ್ಯಾಪ್ತಿಯಲ್ಲಿ ವೈಜ್ಞಾನಿಕ ವನ್ಯಪ್ರಾಣಿ ನುಸುಳು ತಡೆ ಯೋಜನೆ ರೂಪಿಸದೆ ದಶಕಗಳಿಂದ ಅಧಿಕಾರದಲ್ಲಿರುವ ಜನಪ್ರತಿನಿಧಿಗಳ ನಿರ್ಲಕ್ಷö್ಯದಿಂದ ಮಾನವ, ವನ್ಯಪ್ರಾಣಿ ಸಂಘರ್ಷದೊAದಿಗೆ ಅಮಾಯಕ ಮಾನವ ಜೀವಹಾನಿ, ಅಪಾರ ಪ್ರಮಾಣದ ಬೆಳೆ ನಷ್ಟ, ಸಾಕು ಪ್ರಾಣಿಗಳ ಜೀವ ಹಾನಿಯಾಗಲು ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವನ್ಯಜೀವಿ ಹಾವಳಿಯಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಸರಕಾರ, ಜನಪ್ರತಿನಿಧಿಗಳು, ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಸಂಘಟನೆಗಳು ಪ್ರತಿಭಟನೆ ಮಾಡಿ, ಇಲಾಖೆಯ ಉನ್ನತ ಅಧಿಕಾರಿಗಳನ್ನು ಕರೆಸಿಕೊಳ್ಳುವಂತಾಗಿದ್ದು, ಇದರೊಂದಿಗೆ ಪರಿಹಾರ ಚೆಕ್‌ಗಳನ್ನು ಸಹ ಸಂಘಟನೆಯ ಮುಖಂಡರೇ ನೀಡುವಂತಾಗಿದೆ. ನಿಯಮ ಪ್ರಕಾರ ಅರಣ್ಯ ಇಲಾಖಾ ಅಧಿಕಾರಿಗಳು ಪರಿಹಾರ ಚೆಕ್ ವಿತರಿಸಬೇಕು. ಹೀಗಾದರೇ ಜನಪ್ರತಿನಿಧಿಗಳು ಮತ್ತು ಇಲಾಖಾ ಅಧಿಕಾರಿಗಳ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರು.

ಜಿಲ್ಲೆಗೆ ಆಮದು ಹೋರಾಟಗಾರರನ್ನು ಕರೆದುಕೊಂಡು ಬಂದು ಅವರ ಮೂಲಕ ಪ್ರತಿಭಟನೆ ನಡೆಸಿ ಜಿಲ್ಲೆಯ ಅಧಿಕಾರಿಗಳನ್ನು ಹೀನಾಯವಾಗಿ ಸಾರ್ವಜನಿಕವಾಗಿ ನಿಂದಿಸುವ ವೈಖರಿ ಸರಿಯಲ್ಲ. ಈ ಮೂಲಕ ಅಧಿಕಾರಿಗಳ ಆತ್ಮಸ್ಥೆöÊರ್ಯ ಕುಗ್ಗಿಸುವ ಕೆಲಸದಿಂದ ಜಿಲ್ಲೆಯ ಕೆಲಸ ಕಾರ್ಯಗಳಿಗೆ ಲಾಭಕ್ಕಿಂತ ನಷ್ಟವೇ ಆಗುತ್ತದೆ. ವೀರ ಸೇನಾನಿಗಳ ನಾಡಿನಲ್ಲಿ ಆಮದು ಹೋರಾಟಗಾರರನ್ನು ಪ್ರತಿಭಟನೆಗೆ ಕರೆಸಿಕೊಳ್ಳುವ ಸಂಪ್ರದಾಯ ಜಿಲ್ಲೆಯ ಸ್ವಾಭಿಮಾನಕ್ಕೆ ಧಕ್ಕೆತರುತ್ತದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯ ಸಂಚಾಲಕ ಕರ್ನಲ್ ಚೆಪ್ಪುಡಿರ ಪಿ. ಮುತ್ತಣ್ಣ, ಸದಸ್ಯ ಜಮ್ಮಡ ಗಣೇಶ್ ಅಯ್ಯಣ್ಣ, ಕೊಡಗು ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ ಉಪಸ್ಥಿತರಿದ್ದರು.