*ಗೋಣಿಕೊಪ್ಪ, ಜು. ೧೨: ಕೊರೊನಾ ದಿನಗಳಲ್ಲಿ ಸಾಹಿತ್ಯ, ಮನೋರಂಜನೆಯ ಚಟುವಟಿಕೆಗೆ ಉಂಟಾದ ಸಮಸ್ಯೆಯನ್ನು ನೀಗಿಸಬೇಕು ಎಂಬ ನಿಟ್ಟಿನಲ್ಲಿ ಕೊಡಗು ಅಫೀಶಿಯಲ್ ‘ಕ್ಲಬ್ ಹೌಸ್’ ಆ್ಯಪ್‌ನಲ್ಲಿ ಪ್ರಾದೇಶಿಕ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿದ ಪ್ರಾದೇಶಿಕ ಸಾಹಿತ್ಯ ಸಂಭ್ರಮಕ್ಕೆ ಹೊಸತನದ ವೇದಿಕೆಯನ್ನು ಕಲ್ಪಿಸಲಾಗಿದ್ದು, ಯಶಸ್ವಿಯನ್ನು ಕಂಡಿತು.
ಮೇಜರ್ ಕುಶ್ವಂತ್ ಕೋಳಿಬೈಲು ಅವರ ಚಿಂತನೆಯಲ್ಲಿ ಸಾಹಿತ್ಯ ಮತ್ತು ಸಂಸ್ಕöÈತಿಗೆ ಪೂರಕ ವಾತಾವರಣ ನಿರ್ಮಿಸಬೇಕೆಂಬ ನಿಲುವು ಜಿಲ್ಲೆಯ ಪ್ರಾದೇಶಿಕ ಭಾಷೆಗೆ ಒತ್ತುನೀಡಿ ಪ್ರಥಮ ಕಾರ್ಯಕ್ರಮದಲ್ಲಿ ಅರೆಭಾಷೆ, ಕೊಡವ ಮತ್ತು ತುಳು ಕವನಗಳ ವಾಚನದ ಮೂಲಕ ವಿಶಿಷ್ಟ ವೇದಿಕೆಯನ್ನು ಬಳಸಿಕೊಳ್ಳಲಾಯಿತು.
ಸುಮಾರು ನೂರಕ್ಕೂ ಹೆಚ್ಚು ಸಾಹಿತಿಗಳು, ಕವಿಗಳು, ಸಂಗೀತ ಗಾರರು ಮತ್ತು ಕಲೆಯ ಅಭಿರುಚಿವುಳ್ಳವರು ಆಯೋಜಿಸಿದ ಆನ್‌ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡು, ಕವನ ವಾಚನಗಳ ಮೂಲಕ ಸಾಹಿತ್ಯಾಭಿರುಚಿ ಯನ್ನು ವೃದ್ದಿಸಿಕೊಂಡರು.
ಸಾಹಿತಿ ಮತ್ತು ಮೈಸೂರಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾದ ಡಾ ರೇಖಾವಸಂತ್ ಅವರ ನಿರೂಪಣೆಯ ಮೂಲಕ ಕಾರ್ಯ ಕ್ರಮಕ್ಕೆ ಮೆರುಗು ತುಂಬಲಾಯಿತು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಪ್ರಾದೇಶಿಕ ಕಾವ್ಯವಾಚನ ಕಾರ್ಯಕ್ರಮದಲ್ಲಿ ಲೋಕೇಶ್ ಊರುಬೈಲು, ಮಿಲನಾ ಭರತ್, ಜೀವನ್ ಪುರ, ವಿನೋದ್ ಮೂಡಗದ್ದೆ, ಲತನ್ ಐಯೇಟಿ, ಮನೋಜ್ ಕೊಡೆಕಲ್ ಅರೆಭಾಷೆ ಕವಿತೆಗಳನ್ನು ವಾಚಿಸುವ ಮೂಲಕ ಗಮನ ಸೆಳೆದರು.
ಕೊಡವ ಗಾಯನದ ಮೂಲಕ ಜಫ್ರಿ ಅಯ್ಯಪ್ಪ ರಂಜಿಸಿದರು. ಉಳುವಂಗಡ ಕಾವೇರಿ ಉದಯ, ಶಿಲ್ಪಾ ಸುಳ್ಳಿಮಾಡ, ಭವಾನಿ ನಾಣಯ್ಯ, ಶ್ರುತಿಯ ಕರವಟ್ಟಿರ, ಡ್ಯಾನಿ ನಾಣಯ್ಯ, ಬೊಳಿಯಂಗಡ ಬೋಪಣ್ಣರವರ ಕೊಡವ ಕವಿತೆಗಳ ವಾಚನ ಹೃದಯಕ್ಕೆ ತಟ್ಟಿತು.
ತುಳು ಕವಿತೆಗಳನ್ನು ಅನಿತಾ ಪೂಜಾರಿ ಮತ್ತು ಕಿಶೋರ್ ರೈ ಕತ್ತಲೆಕಾಡು ವಾಚಿಸಿದರು. ಡಾ ರೇಖಾ ವಸಂತ್, ಕಾಂಚನ ಕೆದಂಬಾಡಿ, ರಿತೇಶ್ ನೂಜಿಬೈಲು ಅವರು ಕವಿತೆಗಳ ವಿಮರ್ಶೆ ಮಾಡಿದರು.
ಅತಿಥಿಗಳಾಗಿ ಭಾಗವಹಿಸಿದ ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂತೋಷ ತಮ್ಮಯ್ಯ ಪ್ರಾದೇಶಿಕ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಕೊನೆಯಲ್ಲಿ ಕವಿತೆಗಳಿಗೆ ಮನಸ್ಸು ಗಳನ್ನು ಬೆಸೆಯುವ ಗುಣವಿರುವ ಕಾರಣ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವೆಂದು ಹೇಳಿದರು.
ಅರೆಭಾಷೆ ಅಕಾಡಮಿಯ ಅಧ್ಯಕ್ಷರಾಗಿರುವ ಲಕ್ಷೀನಾರಾಯಣ ಕಜೆಗದ್ದೆಯವರು ಮಾತನಾಡುತ್ತಾ ಹಿಂದೆ ತಮ್ಮ ಊರಿನಲ್ಲಿ ನಡೆದ ಚಿತ್ರರಚನಾ ಕಾರ್ಯಕ್ರಮ ಊರಿನ ಜನರಲ್ಲಿ ಸಾಮರಸ್ಯ ಮೂಡಿಸಿದಂತೆ ಬಹುಭಾಷಾ ಕವಿಗೋಷ್ಠಿಗಳು ಸಮಾಜದ ಸಾಮರಸ್ಯವನ್ನು ಹೆಚ್ಚಿಸಬೇಕೆಂಬ ಆಶಯವನ್ನು ವ್ಯಕ್ತ ಪಡಿಸಿದರು. ಖ್ಯಾತ ಕವಯತ್ರಿ ಸ್ಮಿತಾ ಅಮೃತರಾಜ್ ತಮ್ಮ ಕವಿತೆಯನ್ನು ವಾಚಿಸಿದರು.
ಕಾರ್ಯಕ್ರಮದ ಆಯೋಜಕ ಮೇಜರ್ ಕುಶ್ವಂತ್ ಕೋಳಿಬೈಲು ಕಾರ್ಯಕ್ರಮವನ್ನು ಒಂದು ಗಂಟೆಯ ಅವಧಿಯಲ್ಲಿ ಮುಗಿಸಬೇಕೆಂಬ ಆಶಯವಿದ್ದುದರಿಂದ ಎಲ್ಲಾ ಕವಿಗಳನ್ನು ಅಹ್ವಾನಿಸಲು ಆಗಲಿಲ್ಲ. ಅನೇಕ ಹಿರಿಯ ಸಾಹಿತಿಗಳು ಇನ್ನೂ ಕ್ಲಬ್ ಹೌಸಿನಲ್ಲಿ ಇಲ್ಲದ ಕಾರಣ ಅವರನ್ನು ಮುಂದಿನ ದಿನಗಳಲ್ಲಿ ಕರೆಯುವ ಆಲೋಚನೆಯಿದೆ. ಹಾರ, ಶಾಲು, ಶಾಮಿಯಾನ, ಊಟ, ಸ್ಮರಣಿಕೆ, ಧ್ವನಿವರ್ಧಕ ಮತ್ತು ಸ್ಥಳ ಬಾಡಿಗೆ ಇತ್ಯಾದಿಗಳ ಖರ್ಚುಗಳನ್ನು ಕ್ಲಬ್ ಹೌಸ್ ಉಳಿಸುತ್ತದೆ ಎಂದು ಹೇಳಿದರು. -ಎನ್.ಎನ್ ದಿನೇಶ್