*ಗೋಣಿಕೊಪ್ಪ, ಜು. ೧೨: ಗ್ರಾಮೀಣ ಭಾಗಗಳಲ್ಲಿ ಕೆರೆಗಳು ಸಮೃದ್ದಿಗೊಂಡಾಗ ಜಲಮಟ್ಟ ಉಳಿದುಕೊಳ್ಳಲು ಸಾಧ್ಯವಿದೆ. ಇದರಿಂದ ನೀರಿನ ಹಾಹಾಕಾರವನ್ನು ತಗ್ಗಿಸಬಹು ದಾಗಿದ್ದು, ಗ್ರಾಮಗಳಲ್ಲಿ ಕೆರೆ ಅಭಿವೃದ್ದಿ ಕಾಮಗಾರಿಗಳು ಯಥೇಚ್ಚವಾಗಿ ನಡೆಯಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ತಿಳಿಸಿದರು.

ಬಲ್ಯಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೂಚಮಕೇರಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿಯಲ್ಲಿ ಅಭಿವೃದ್ದಿಗೊಂಡ ಬೆಳ್ಳಂದಿ ದೊಡ್ಡಕೆರೆಯನ್ನು ಗ್ರಾಮದ ಕೃಷಿಕರ ಅನುಕೂಲಕ್ಕಾಗಿ ಅನುವು ಮಾಡಿಕೊಟ್ಟು ಮಾತನಾಡಿದರು.

ಕೆರೆಯ ದಂಡೆಯ ಸುತ್ತ ಗಸಗಸೆ ಗಿಡಗಳನ್ನು ನೆಟ್ಟು ಕೆರೆಯಲ್ಲಿ ಜಲಮೂಲಗಳು ನೆಲಸಿಕೊಂಡಾಗ ಕೊಳವೆ ಬಾವಿ ಮತ್ತು ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯನ್ನು ಕಾಣಬಹುದಾಗಿದೆ. ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಪ್ಪಿಸಿ ಕೆರೆಯ ಮೂಲಕ ಮಳೆ ನೀರು ಸಂಗ್ರಹಣೆಗೊAಡಾಗ ಕೃಷಿ ಚಟುವಟಿಕೆಗೆ ಹೆಚ್ಚಿನ ಅನುಕೂಲವಾಗು ವುದರೊಂದಿಗೆ ಪ್ರಾಣಿ ಪಕ್ಷಿಗಳಿಗೂ ನೀರುಣಿಸಲು ಸಹಕಾರವಾಗಲಿದೆ. ಇದರಿಂದ ಬೇಸಿಗೆಯಲ್ಲಿ ಎದುರಾಗುವ ನೀರಿನ ಅಭಾವವನ್ನು ತಗ್ಗಿಸಲು ಸಹಕಾರಿಯಾಗಲಿದೆ ಎಂದರು.

ಪ್ರತಿ ಗ್ರಾಮಗಳಲ್ಲಿಯೂ ಪಾಳು ಬಿದ್ದ ಕೆರೆಗಳನ್ನು ಗುರುತಿಸಿ ಪಂಚಾಯಿತಿ ಮಟ್ಟದಲ್ಲಿ ಕೆರೆಗಳ ಹೂಳೆತ್ತುವ ಕಾರ್ಯ ನಡೆಸಬೇಕಾಗಿದೆ. ಈ ಮೂಲಕ ಜೀವ ಜಲವನ್ನು ಕಾಪಾಡಿಕೊಳ್ಳಬೇಕಾಗಿದೆ. ಇಂತಹ ಯೋಜನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಅನುಷ್ಠಾನ ಗೊಂಡು ನಮ್ಮೂರು ನಮ್ಮ ಕೆರೆ ಎಂಬ ಯೋಜನೆಯಲ್ಲಿ ಕೆರೆಯ ಹೂಳೆತ್ತುವ ಕಾಮಗಾರಿ ನಡೆಸುತ್ತಿರುವುದು ಉತ್ತಮ ಕಾರ್ಯ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭ ಧರ್ಮಸ್ಥಳ ಸ್ವಸಹಾಯ ಸಂಘಗಳ ಪಾಲುದಾರ ಸದಸ್ಯರಿಗೆ ಲಾಭಾಂಶ ವಿತರಣೆ ಚೆಕ್ಕನ್ನು ಸದಸ್ಯರಿಗೆ ಶಾಸಕರ ಮೂಲಕ ಹಸ್ತಾಂತರಿಸಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ್‌ಸಾಲ್ಯಾನ್, ಜಿಲ್ಲಾ ನಿರ್ದೇಶಕ ಯೋಗೇಶ್, ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಬಾನಂಗಡ ಅರುಣ್‌ಕುಮಾರ್, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ, ಉಪನಿರೀಕ್ಷಕ ರವಿಶಂಕರ್, ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ರಾಜೇಶ್, ತಾಲೂಕು ಯೋಜನಾಧಿಕಾರಿ ಹೆಚ್. ಪದ್ಮಯ್ಯ, ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ಮುರುಗೇಶ್ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಹಾಜರಿದ್ದರು. -ಎನ್.ಎನ್. ದಿನೇಶ್