ಚೆಟ್ಟಳ್ಳಿ, ಜು. ೧೨: ಆನ್ಲೈನ್ ಮೂಲಕ ಪಠ್ಯಕಲಿಯಬೇಕೆಂದರೆ ನೆಟ್ವರ್ಕ್ಕನ್ನು ಹುಡುಕುತ್ತಾ ವಾಹನದಲ್ಲಿ ತೆರಳಿ ಆನ್ಲೈನ್ ಪಾಠವನ್ನು ವಾಹನದೊಳಗೆ ಕೂತು ಕಲಿಯುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಮಡಿಕೇರಿ ತಾಲೂಕಿನ ಚೇಲಾವರ ಗ್ರಾಮದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಯಪಂಡ ದೀರಜ್ ತಿಮ್ಮಯ್ಯ ಅವರ ಮಕ್ಕಳಾದ ಗೋಣಿಕೊಪ್ಪದ ಕಾಲ್ಸ್ ಶಾಲೆಯ ಒಂಭತ್ತು ಹಾಗೂ ಮೂರನೇ ತರಗತಿಯಲ್ಲಿ ಓದುತ್ತಿರುವ ಪ್ರಶಾ ಹಾಗೂ ಪ್ರತ್ಯುಶ ಎಂಬ ಪುಟ್ಟ ಹೆಣ್ಣುಮಕ್ಕಳಿಗೆ ಮನೆಯಲ್ಲಿ ನೆಟ್ವರ್ಕ್ ಸಿಗದೆ ಪರದಾಡುತ್ತಿರುವ ಪರಿಸ್ಥಿತಿ. ತಂದೆ ದೀರಜ್ ನಿತ್ಯವೂ ಮಕ್ಕಳನ್ನು ಚೇಲಾವರ ಫಾಲ್ಸ್ ಸಮೀಪ ನೆಟ್ವರ್ಕ್ ದೊರೆಯುವ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿ ಆನ್ಲೈನ್ ಪಾಠ ಕಲಿಸುತ್ತಾರೆ. ಪತ್ನಿಯನ್ನು ಮಕ್ಕಳೊಂದಿಗೆ ಬಿಟ್ಟು ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿ ಮಧ್ಯಾಹ್ನ ಆನ್ಲೈನ್ ತರಗತಿ ಮುಗಿದ ನಂತರ ಮನೆಗೆ ಕರೆತರುತ್ತಾರೆ.
ಮಕ್ಕಳಿಗೆ ನೀಡುವ ಹೋಮ್ವರ್ಕ್ ಮುಗಿದ ನಂತರ ರಾತ್ರಿ ಮಕ್ಕಳನ್ನು ನೆಟ್ವರ್ಕ್ ಸಿಗುವಲ್ಲಿಗೆ ಕರೆದುಕೊಂಡು ಹೋಗಿ ಅಪ್ಲೋಡ್ ಮಾಡಿ ಬರುತ್ತಾರೆ. ಚೇಲಾವರದಲ್ಲಿ ಕಾಡಾನೆಗಳು ನಿತ್ಯವೂ ಸಂಚರಿಸುತಿದ್ದರೂ ಒಂದು ಬದಿ ಕಾಡಾನೆಗಳ ಭಯ ಮತ್ತೊಂದು ಬದಿ ನೆಟ್ವರ್ಕ್ ಸಮಸ್ಯೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಪರದಾಡುವ ಪರಿಸ್ಥಿತಿಯಾಗಿದೆ. ಡೋಂಗಲ್ಗಳನ್ನು ಮರದ ಮೇಲೆ ನೇತುಹಾಕಿದರೂ ನೆಟ್ವರ್ಕ್ ಸಿಗುತ್ತಿಲ್ಲವೆಂದು ದೀರಜ್ ತಿಮ್ಮಯ್ಯ ಹೇಳುತ್ತಾರೆ.
ನಿತ್ಯವೂ ನೆಟ್ವರ್ಕ್ ಸಮಸ್ಯೆಯಿಂದ ಇಲ್ಲಿನ ಹಲವು ಮಕ್ಕಳು ಅನ್ ಲೈನ್ ಪಾಠ ಕಲಿಯಲು ಪರಿತಪಿಸು ತ್ತಿದ್ದಾರಲ್ಲದೆ ಸಾರ್ವಜನಿಕರು ಪರದಾಡುತಿದ್ದಾರೆ. ಹಲವು ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಬಿಸ್ಎನ್ ಎಲ್ನ ಹೈಸ್ಪೀಡ್ ಆಪ್ಟಿಕಲ್ ಫೈಬರ್ ಕೇಬಲನ್ನು ಅಳವಡಿಸಲು ಪಂಚಾಯಿತಿ ಅನುಮತಿ ಪಡೆಯಬೇಕೆಂದಿದಕ್ಕೆ ಹಲವೆಡೆ ಕೇಬಲ್ ಅವಡಿಸಲು ತಡವಾಗಿದೆ. ಸರಕಾರದ ಅಧೀನದಲ್ಲಿರುವ ಬಿಎಸ್ಎನ್ಎಲ್ ಕೇಬಲ್ ಅಳವಡಿಕೆಗೆ ಪಂಚಾಯಿತಿಯ ಅನುಮತಿ ಪಡೆಯಬೇಕೆ?
ಮಕ್ಕಳಿಗೆ ಆನ್ಲೈನ್ ಕಲಿಕೆಗೆ ನಿತ್ಯವೂ ಒದ್ದಾಡುತಿರುವ ದೀರಜ್ ತಿಮ್ಮಯ್ಯ ಓಎಫ್ಸಿ ಕೇಬಲನ್ನು ಅಳವಡಿಸಿಕೊಡಿ ಎಂದು ಅಧಿಕಾರಿ ಗಳಿಗೆ ಒತ್ತಡ ಹೇರುತಿದ್ದರೂ, ಇಂದು- ನಾಳೆಗಳ ಲೆಕ್ಕಾಚಾರ ಹೇಳುತ್ತಿದ್ದಾರೆ. ಕೊಡಗಿನ ಹಲವೆಡೆ ನೆಟ್ವರ್ಕ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಹಿಡಿಶಾಪ ಹಾಕುವಂತಾಗಿದೆ.
-ಪುತ್ತರಿರ ಕರುಣ್ಕಾಳಯ್ಯ