ಕಣಿವೆ, ಜು. ೧೦: ಈ ಬಾರಿ ವರುಣನ ಮುನಿಸಿನಿಂದಾಗಿ ರೈತರ ಜೀವನಾಡಿ ಹಾರಂಗಿ ಜಲಾಶಯ ಭರ್ತಿಯಾಗದ ಹಿನ್ನೆಲೆ ಕೊಡಗಿನ ಗಡಿ ಭಾಗದ ಕೃಷಿಕರಲ್ಲಿ ಆತಂಕದ ಕಾರ್ಮೋಡ ಕವಿದಿದೆ.

ಏಕೆಂದರೆ ಪ್ರತೀ ವರ್ಷದ ಜುಲೈ ಮೊದಲ ವಾರದಲ್ಲಿ ಹಾರಂಗಿ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ರೈತರು ಭತ್ತದ ಬಿತ್ತನೆಗೆ ಮುಂದಾಗುತ್ತಿದ್ದರು. ಹಾಗೆಯೇ ಜುಲೈ ಮಾಸಾಂತ್ಯದಲ್ಲಿ ಭತ್ತದ ನಾಟಿ ಪೂರ್ಣಗೊಳಿಸುತ್ತಿದ್ದರು. ಆದರೆ ಈ ಬಾರಿ ಮುಂಗಾರು ಕ್ಷೀಣಿಸಿರುವುದರಿಂದ ಹಾರಂಗಿ ಜಲಾಶಯದಲ್ಲಿ ಈವರೆಗೆ ಕೇವಲ ೨೮೪೩ ಅಡಿಗಳಷ್ಟು ನೀರು ಶೇಖರಣೆಗೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೨೮೪೮ ಅಡಿಗಳಷ್ಟು ನೀರು ಸಂಗ್ರಹವಾಗಿತ್ತು.

ಆದರೆ ಈ ಬಾರಿ ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಸಂಪೂರ್ಣವಾಗಿ ಕ್ಷೀಣವಾಗಿರುವುದರಿಂದ ಜಲಾಶಯಕ್ಕೆ ಕೇವಲ ೩೩೯ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಆದರೆ ಕಳೆದ ವರ್ಷ ಈ ಸಮಯದಲ್ಲಿ ಉತ್ತಮ ಮಳೆ ಆಗುತ್ತಿದ್ದರಿಂದ ಜಲಾಶಯಕ್ಕೆ ೩,೫೮೩ ಕ್ಯೂಸೆಕ್ಸ್ ನೀರು ಹರಿದು ಬರುತ್ತಿತ್ತು. ಆದರೆ ಜುಲೈ ಎರಡನೆ ವಾರದ ಈ ದಿನಗಳಲ್ಲಿ ಜಲಾಶಯ ವ್ಯಾಪ್ತಿಯಲ್ಲಿ ಮಳೆಯೇ ಸುರಿದಿಲ್ಲ ಎಂಬ ಹವಾಮಾನ ಇಲಾಖೆಯ ವರದಿ ಅಚ್ಚುಕಟ್ಟು ರೈತರಲ್ಲಿ ದಿಗಿಲು ಮೂಡಿಸಿದೆ. ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿದು ಜಲಾಶಯಕ್ಕೆ ಸರಾಗವಾಗಿ ನೀರು ಹರಿದು ಬಂದಲ್ಲಿ ಸಂತಸದಿAದ ರೈತರು ಬಿತ್ತನೆಗೆ ಮುಂದಾ ಗುತ್ತಿದ್ದರು. ಆದರೆ ಈ ಬಾರಿ ಕಳೆದ ೧೬ ದಿನ ಗಳಿಂದ ಆರಿದ್ರಾ ಮಳೆಯೇ ಸುರಿಯದಿರುವುದು ಕೃಷಿಕರಲ್ಲಿ ಈಗ ಸಂಕಟ ಉಂಟುಮಾಡಿದೆ.

ಜಲಾಶಯಕ್ಕೆ ಸಮೃದ್ಧಿಯ ನೀರು ಹರಿದು ಬಂದು ಜಲಾಶಯ ತುಂಬಿದ ಬಳಿಕ ಕಾಲುವೆಗೆ ನೀರು ಹರಿಸಿದಾಗ, ಎಡದಂಡೆ ಕಾಲುವೆಯ ೧೩ ರಿಂದ ೧೮ನೇ ತೂಬಿನವರೆಗಿನ ಕೃಷಿಕರ ಅಚ್ಚುಕಟ್ಟು ಗದ್ದೆಗಳಿಗೆ ಸರಾಗವಾಗಿ ನೀರು ಇಂದಿಗೂ ಹರಿಯದ ದುಸ್ಥಿತಿ ಇದ್ದರೂ ಕೂಡ ಈ ಬಗ್ಗೆ ನೀರಾವರಿ ನಿಗಮದ ಅಧಿಕಾರಿಗಳು ಗಮನ ಹರಿಸಿಲ್ಲ. ನಾವು ಪ್ರತೀ ವರ್ಷವೂ ತುದಿ ಭಾಗದ ಗದ್ದೆಗಳಿಗೆ ನೀರು ಹಾಯಿಸಲು ಬಹಳಷ್ಟು ತ್ರಾಸದಿಂದ ಸಾಹಸ ಪಟ್ಟು ನೀರನ್ನು ಕೊಂಡೊಯ್ಯುತ್ತಿದ್ದೇವೆ. ಅದಲ್ಲದೇ ರಾತ್ರಿ ಹಗಲೆನ್ನದೇ ಪಾಳಿ ಮೂಲಕ ನೀರನ್ನು ಹಂಚಿಕೆ ಮಾಡಿಕೊಳ್ಳುವ ನಾವುಗಳು ಒಬ್ಬೊಬ್ಬರಾಗಿ ನೀರು ಹರಿಸಿಕೊಳ್ಳುತ್ತೇವೆ ಎಂದು ವಿಷಾದಿಸುತ್ತಾರೆ ತೊರೆನೂರು ಕೃಷಿಕ ಟಿ.ಜಿ. ಲೋಕೇಶ್.

ಹಾಗೆಯೇ ಮುಖ್ಯ ಕಾಲುವೆ ಹಾಗೂ ಉಪಕಾಲುವೆಗಳಲ್ಲಿ ಬೆಳೆದಿರುವ ಕಾಡು ಹಾಗೂ ತುಂಬಿರುವ ಹೂಳನ್ನೇ ತೆಗೆಯದೇ ತರಾತುರಿಯಲ್ಲಿ ನೀರು ಗಮಹರಿಸಲಾಗುತ್ತದೆ. ಈ ನೀರು ನಮ್ಮ ಕೃಷಿಕರ ಗದ್ದೆಗಳಿಗೆ ಇಳಿಯದೇ ಹಳ್ಳ ಬಿದ್ದು ಕಾವೇರಿ ನದಿ ಸೇರುತ್ತದೆ ಎಂದು ಹೆಬ್ಬಾಲೆಯ ಕೃಷಿಕ ಬಸವರಾಜು, ನಾರಾಯಣ, ಕೃಷ್ಣಪ್ರಸಾದ್ ಮೊದಲಾದವರು ಹೇಳುತ್ತಾರೆ.

ಈ ಕುರಿತು ಹಾರಂಗಿ ಜಲಾಶಯ ವಿಭಾಗದ ಅಸಿಸ್ಟೆಂಟ್ ಇಂಜಿನಿಯರ್ ಸಿದ್ಧರಾಜ್ ಶೆಟ್ಟಿ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಅವರು ನೀಡಿದ ಮಾಹಿತಿ ಹೀಗಿದೆ. ನೀರು ಶೇಖರಣಾ ಸಾಮರ್ಥ್ಯದ ೮.೫ ಟಿ.ಎಂ.ಸಿ. ಪೈಕಿ ಈಗ ೪.೫ ಟಿ.ಎಂ.ಸಿ. ಮಾತ್ರವಿದೆ. ರಾಜ್ಯ ಮಟ್ಟದಲ್ಲಿ ಚರ್ಚೆ ನಡೆದು ನೀರಿನ ಪ್ರಮಾಣ ಅನುಸರಿಸಿ ನೀರು ಬಿಡಲಾಗುತ್ತದೆ. ಕಾಲುವೆಗಳಲ್ಲಿ ಹೂಳೆತ್ತುವ, ಸುತ್ತ ಕಾಡು ಕಡಿಯುವ ಕೆಲಸ ಪ್ರಾರಂಭಿಸಲಾಗಿದೆ.

- ಕೆ.ಎಸ್. ಮೂರ್ತಿ