ಮಡಿಕೇರಿ, ಜು. ೧೦: ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಮಳೆಗಾಲದ ಈ ಸಂದರ್ಭದಲ್ಲಿಯೂ ನಿರಂತರವಾಗಿ ಬಿಸಿಲಿನ ವಾತಾವರಣ ಕಂಡು ಬಂದಿದ್ದು, ರೈತಾಪಿ ವಲಯದಲ್ಲಿ ಆತಂಕ ಸೃಷ್ಟಿಯಾಗಿತ್ತು. ಜೂನ್ ಎರಡನೇ ವಾರದಲ್ಲಿ ಎಂಟತ್ತು ದಿನಗಳ ಕಾಲ ಮಳೆಯಾಗಿದ್ದು, ನಂತರದಲ್ಲಿ ಮುಂಗಾರು ಕ್ಷೀಣಗೊಂಡಿತ್ತು. ನಿರಂತರವಾಗಿ ಬಿಸಿಲಿನ ಸನ್ನಿವೇಶದಿಂದಾಗಿ ಇದು ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾದಂತಾಗಿತ್ತು. ಭತ್ತದ ಬೆಳೆ ಹಾಗೂ ಜೋಳದ ಕೃಷಿಕರು ಮಳೆಗಾಗಿ ಕಾಯುವಂತಾಗಿತ್ತು.

ಇದೀಗ ಕಳೆದ ರಾತ್ರಿಯಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಆರಂಜ್ ಅಲರ್ಟ್ ಘೋಷಿಸಿತ್ತು. ಅಲ್ಲದೆ ತಾ. ೧೧ ರಿಂದ ೧೩ರ ತನಕ ಭಾರೀ ಮಳೆಯಾಗುವ ಸಾಧ್ಯತೆ ಇರುವದಾಗಿಯೂ ಮಾಹಿತಿ ನೀಡಿದ್ದು, ಈ ಅವಧಿಯಲ್ಲಿ ರೆಡ್ ಅಲರ್ಟ್ ಘೋಷಣೆಯನ್ನೂ ಮಾಡಿದೆ. ತಾ. ೧೦ ರ ಅಪರಾಹ್ನದಿಂದ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ಹಲವಾರು ವಿಭಾಗಗಳಲ್ಲಿ ಬಿರುಸಿನ ಮಳೆಯಾಗಿದೆ.

ಈ ತನಕ ಬಿಸಿಲಿನಿಂದಾಗಿ ಮುಂದೇನು ಎಂಬ ಚಿಂತೆಯಲ್ಲಿದ್ದ ಕೃಷಿಕರಲ್ಲಿ ಈಗ ಕಂಡುಬರುತ್ತಿರುವ ಮಳೆ ಒಂದಷ್ಟು ನೆಮ್ಮದಿ ಮೂಡಿಸಿದೆ. ಸಾಧಾರಣವಾಗಿ ಈ ಸಂದರ್ಭದಲ್ಲಿ ಕಾಫಿಗಿಡಗಳ ಮರು ನಾಟಿ ಸೇರಿದಂತೆ, ವಿವಿಧ ರೀತಿಯ ಗಿಡಗಳನ್ನು ಜನರು ತಮ್ಮ ತಮ್ಮ ಜಾಗದಲ್ಲಿ ನೆಟ್ಟು ಪೋಷಿಸುವದು ಸಾಮಾನ್ಯವಾಗಿದೆ. ಈ ರೀತಿಯಲ್ಲಿ ವಿವಿಧ ತಳಿಯ ಗಿಡಗಳನ್ನು ನೆಟ್ಟಿದ್ದವರಲ್ಲೂ ಮಳೆಯಿಲ್ಲದೆ ನೆಟ್ಟ ಗಿಡಗಳು ಒಣಗುವಂತಾಗುತ್ತಿದ್ದುದು ಚಿಂತೆ ಮೂಡಿಸಿತ್ತು. ಗದ್ದೆಗಳಿಗೆ ನದಿ - ಕೆರೆಗಳಿಂದ ನೀರನ್ನು ಆಶ್ರಯಿಸುವಂತಾಗಿತ್ತು. ಸೋಮವಾರಪೇಟೆ: ಕಳೆದ ೨೦ ದಿನಗಳಿಂದಲೂ ಬಿಸಿಲಿನ ವಾತಾವರಣ ಇದ್ದುದರಿಂದ ಕೃಷಿ ಕಾರ್ಯಗಳಿಗೆ ಕೊಂಚ ಹಿನ್ನಡೆಯಾಗಿದ್ದು, ಇದೀಗ ನಿನ್ನೆಯಿಂದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುತ್ತಿರುವ ಹಿನ್ನೆಲೆ ಕೃಷಿ ಕಾರ್ಯವೂ ಚುರುಕು ಪಡೆಯುತ್ತಿದೆ.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ನಿಗದಿತ ಅವಧಿಯಲ್ಲಿ ಪ್ರಾರಂಭವಾದರೂ, ನಂತರದ ದಿನಗಳಲ್ಲಿ ಕೈಕೊಟ್ಟಿದ್ದರಿಂದ ಭತ್ತದ ಕೃಷಿಕರಲ್ಲಿ ಆತಂಕ ಮನೆ ಮಾಡಿತ್ತು. ಮುಂಗಾರು ಮಳೆಯನ್ನು ನಂಬಿಕೊAಡಿರುವ ಭತ್ತ ಕೃಷಿಕರು, ಜೂನ್ ತಿಂಗಳ ಕೊನೆ ವಾರ ಅಥವಾ ಜುಲೈ ಮೊದಲ ವಾರದಲ್ಲಿ ಭತ್ತ ಸಸಿ ನಾಟಿ ಮಾಡಲು ಈಗಾಗಲೆ ಸಸಿ ಮಡಿ ಮಾಡಿದ್ದಾರೆ. ಮುಂಗಾರು ಮಳೆ ಪ್ರಾರಂಭವಾಗದ್ದರಿAದ ಆತಂಕಗೊAಡಿದ್ದ ಕೃಷಿಕರಿಗೆ ಇದೀಗ ಸುರಿಯುತ್ತಿರುವ ಮಳೆ ಸಮಾಧಾನ ಮೂಡಿಸಿದೆ.

ಕಳೆದ ಎರಡು ವರ್ಷಗಳಿಂದ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಭತ್ತದ ಕಣಜ ಎಂದು ಕರೆಸಿಕೊಂಡಿದ್ದ ಸೋಮವಾರಪೇಟೆ ತಾಲೂಕಿನಲ್ಲಿ ಭಾರೀ ಪ್ರಮಾಣದಲ್ಲಿ ಭತ್ತದ ಗದ್ದೆಗಳಿಗೆ ಹಾನಿಯಾಗಿತ್ತು. ೨೦೧೮ರವರೆಗೂ ೧೧ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತಿತ್ತು. ಭೂಕುಸಿತದಿಂದಾಗಿ ಕೃಷಿ ಗದ್ದೆಗಳಿಗೆ ಮಣ್ಣು, ಮರಳು ತುಂಬಿ ಕೃಷಿಗೆ ಅಯೋಗ್ಯವಾಗಿದ್ದು ಒಂದೆಡೆ ಯಾದರೆ, ಭತ್ತ ಕೃಷಿಯತ್ತ ಹೆಚ್ಚಿನ ರೈತರು

(ಮೊದಲ ಪುಟದಿಂದ) ಮಾತ್ರವಲ್ಲದೆ ಇದೀಗ ಫಸಲು ಬಿಡುತ್ತಿರುವ ಕರಿಮೆಣಸು ಬಳ್ಳಿಗಳಿಗೂ ನೀರಿಲ್ಲದೆ ಬೆಳೆಗಾರರು ನೀರು ಹಾಯಿಸುತ್ತಿದ್ದದೂ ಹಲವೆಡೆ ಕಂಡು ಬಂದಿತ್ತು. ಇದೀಗ ಸುರಿಯುತ್ತಿರುವ ಮಳೆ ಈ ಎಲ್ಲರಿಗೂ ತುಸು ಹರ್ಷದಾಯಕವಾದಂತಿದೆ. ಭತ್ತದ ಕೃಷಿ ಕೆಲಸ ಪ್ರಗತಿಯಲ್ಲಿದ್ದು, ಈಗಾಗಲೇ ಹಲವೆಡೆ ರೈತರು ನಾಟಿ ಕೆಲಸ ಪ್ರಾರಂಭಿಸಿದ್ದರೆ, ಇನ್ನು ಕೆಲವೆಡೆಗಳಲ್ಲಿ ಭತ್ತದ ಸಸಿಮಡಿ ನಾಟಿ ಕೆಲಸಕ್ಕೆ ಸಿದ್ಧಗೊಳುತ್ತಿದೆ.

ವೀರಾಜಪೇಟೆ : ವೀರಾಜಪೇಟೆ ವಿಭಾಗಕ್ಕೆ ಶುಕ್ರವಾರ ಅಪರಾಹ್ನದಿಂದ ಶನಿವಾರ ಬೆಳಗ್ಗಿನವರೆಗೆ ಗುಡುಗು ಸಹಿತ ಮಳೆಯಾಗಿದೆ. ಬೆಳಗ್ಗಿನಿಂದ ಈ ವಿಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು, ಶನಿವಾರ ಬೆಳಗ್ಗಿನಿಂದಲೇ ಮಳೆ ಸುರಿಯುತ್ತಿದೆ.

ಇಂದು ಬೆಳಗಿನ ೮ಗಂಟೆಯವರೆಗೆ ಒಟ್ಟು ೫೮.೪ ಮಿ.ಮೀ (೨.೩ ಇಂಚುಗಳಷ್ಟು) ಮಳೆ ಸುರಿದಿದೆ. ವೀರಾಜಪೇಟೆ ವಿಭಾಗಕ್ಕೆ ನಿನ್ನೆ ದಿನ ರಾತ್ರಿ ಭಾರೀ ಮಳೆಯಾಗಿದ್ದರೂ ಯಾವುದೇ ಹಾನಿಯಾದ ಕುರಿತು ಇಲ್ಲಿನ ಪಟ್ಟಣ ಪಂಚಾಯಿತಿಗೆ ದೂರು ಬಂದಿಲ್ಲ. ಈ ಭಾರೀ ಮಳೆ ಮುಂದುವರೆದರೆ ಈ ವಿಭಾಗದ ಅರಸುನಗರ, ಮಲೆತಿರಿಕೆಬೆಟ್ಟ, ಅಯ್ಯಪ್ಪಬೆಟ್ಟ,ನೆಹರೂನಗರದ ಬೆಟ್ಟದ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳು ಜಾಗೃತರಾಗಿರುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಕೃಷಿ ಚಟುವಟಿಕೆಗಳು ಮತ್ತೆ ಆರಂಭ

ಮಳೆಯ ಬಿಡುವಿನಿಂದ ಸ್ಥಗಿತಗೊಂಡಿದ್ದ ಕೃಷಿ ಚಟುವಟಿಕೆಗಳು ನಿನ್ನೆಯ ಮಳೆಗೆ ಮತ್ತೆ ಆರಂಭಗೊAಡಿದ್ದು ಬೇಟೋಳಿ, ಆರ್ಜಿ, ಬಿಟ್ಟಂಗಾಲ, ನಾಂಗಾಲ ಸುತ್ತಮುತ್ತಲ ಪ್ರದೇಶ ಹಾಗೂ ಕಾರ್ಮಾಡು, ಬಿಳುಗುಂದ, ಚೋಕಂಡಳ್ಳಿ, ಐಮಂಗಲ ಸುತ್ತಮುತ್ತಲ ಪ್ರದೇಶಗಳಲ್ಲಿ ಕೃಷಿಚಟುವಟಿಕೆಗೆ ಚಾಲನೆ ನೀಡಲಾಗಿದೆ.