ಕರಿಕೆ/ಭಾಗಮಂಡಲ, ಜು. ೧೦ : ಜಿಲ್ಲೆಯ ಏಕೈಕ ಗ್ರಾಮ ಹಾಗೂ ಏಕೈಕ ಪಂಚಾಯಿತಿ ಆಗಿರುವ ಕರಿಕೆ ಗ್ರಾಮ ಪಂಚಾಯಿತಿ ಜಿಲ್ಲಾ ಕೇಂದ್ರದಿAದ ಸುಮಾರು ಎಪ್ಪತ್ತು ಕಿ.ಮೀ. ಅಂತರದಲ್ಲಿದೆ. ಕೇರಳದ ಕಾಸರಗೋಡು ಜಿಲ್ಲೆ ಹಾಗೂ ದ.ಕ. ಜಿಲ್ಲೆಯ ಗಡಿಯನ್ನು ಹೊಂದಿರುವ ಈ ಗ್ರಾಮಕ್ಕೆ ಕಳೆದ ಹತ್ತು ವರ್ಷಗಳಿಂದ ಚಿಕೂನ್ ಗೂನ್ಯ, ಡೆಂಗ್ಯೂ, ಮಲೆರಿಯಾ, ಕೊರೊನಾ ಸೇರಿದಂತೆ ಒಂದಲ್ಲ ಒಂದು ಸಾಂಕ್ರಮಿಕ ರೋಗ ಕಾಣಿಸಿ ಕೊಳ್ಳುತ್ತ್ತಲೇ ಇದೆ. ಖಾಯಿಲೆಗೆ ತುತ್ತಾಗಿ ಜೀವ ಕಳೆದುಕೊಂಡ ಉದಾ ಹರಣೆಗಳಿವೆ. ಕಳೆದ ವರ್ಷದಿಂದ ಪ್ರಪಂಚದಾದ್ಯAತ ಕಾಣಿಸಿಕೊಂಡ ಮಹಾಮಾರಿ ಕೊರೊನಾ ದೇಶ ವ್ಯಾಪಿ ಹರಡಿ ಜನರನ್ನು ಹೈರಾಣಾಗಿಸಿ ಇದೀಗ ಜಿಲ್ಲೆಯಲ್ಲಿ ಒಂದು ಹಂತದಲ್ಲಿ ನಿಯಂತ್ರಣ ದಲ್ಲಿದ್ದರೆ ಗಡಿ ಗ್ರಾಮ ಕರಿಕೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿದ್ದು, ಗ್ರಾಮದಲ್ಲಿ ಆತಂಕ ಮೂಡಿದೆ.

ಪ್ರಸ್ತುತ ಗ್ರಾಮದಲ್ಲಿ ೩೪ ಸಕ್ರಿಯ ಪಾಸಿಟಿವ್ ಪ್ರಕರಣಗಳಿದ್ದು, ಮಡೆಕಾನ ೪, ಚೆತ್ತುಕಾಯ ೧, ಕುಂಡತ್ತಿಕಾನ ೩, ಆಲತ್ತಿಕಡವು ೧, ಮರಾಠಿ ಮೂಲೆ ೧ ಮನೆಗಳು ಸೀಲ್‌ಡೌನ್ ಆಗಿವೆ. ಇಲ್ಲಿನ ನಿವಾಸಿಗಳು ದೈನಂದಿನ ಖರ್ಚುಗಳಿಗೆ ಕೂಲಿ ಕೆಲಸವನ್ನು ಅವಲಂಬಿಸಿ ಬದುಕು ಸಾಗಿಸುತ್ತಿದ್ದು, ಗ್ರಾಮದಲ್ಲಿ ಹೆಚ್ಚಿನವರು ಕಡು ಬಡವರಾಗಿದ್ದಾರೆ. ಇದೀಗ ಪಾಸಿಟಿವ್ ಪತ್ತೆಯಾಗಿ ಸೀಲ್‌ಡೌನ್ ಆದ ಕಾರಣ ಜನರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ.

ಜಿಲ್ಲಾಡಳಿತದ ನೆರವು ಇಲ್ಲ : ನಿತ್ಯ ದುಡಿದು ತಿನ್ನುವ ಇವರಿಗೆ ಜಿಲ್ಲಾಡಳಿತ ದಿಂದ ಯಾವುದೇ ಕಿಟ್ ವಿತರಿಸಿರುವುದಿಲ್ಲ. ಸೀಲ್ ಡೌನ್ ಆಗಿರುವ ಕೆಲವು ಮನೆಗಳಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಗ್ರಾಂ.ಪA.ಸದಸ್ಯರು ಕಿಟ್ ವಿತರಿಸುತ್ತಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿ, ಸಿಬ್ಬಂದಿವರ್ಗ, ಆಶಾ, ಆರೋಗ್ಯ ಕಾರ್ಯಕರ್ತರು ಕೋವಿಡ್ ನಿಯಂತ್ರಣ ಮಾಡಲು ಶ್ರಮಪಡುತ್ತಿದ್ದಾರೆ.

ಸೀಲ್‌ಡೌನ್ ತೆರವು: ಎರಡು ದಿನಗಳ ಹಿಂದೆ ದಿಢೀರ್ ಗ್ರಾಮದಲ್ಲಿ ಪಾಸಿಟಿವ್ ಪ್ರಕರಣ ಹದಿನೈದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ದಿಢೀರನೆ ಗ್ರಾಮವನ್ನು ಸೀಲ್‌ಡೌನ್ ಮಾಡಿ ಆದೇಶ ಹೊರಡಿಸಿದ ಪರಿಣಾಮ ಜನರು ಗಾಬರಿಗೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಗ್ರಾ.ಪಂ. ತುರ್ತು ಟಾಸ್ಕ್ಫೋರ್ಸ್ ಸಭೆ ನಡೆಸಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿ ಪಾಸಿಟಿವ್ ಕಾಣಿಸಿಕೊಂಡ ಭಾಗದ ಆಯಾ ಮನೆಗಳನ್ನು ಸೀಲ್‌ಡೌನ್ ಮಾಡಿ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಲಿಸುವಂತೆ ಕೋರಿದ ಕಾರಣ ಆಯಾ ಮನೆಗಳನ್ನು ಸೀಲ್‌ಡೌನ್ ಮಾಡಲು ತಹಶೀಲ್ದಾರ್ ಸೂಚನೆ ನೀಡಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಅಂಗಡಿ ಮಾಲೀಕರಿಗೆ ದಿನಸಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಅವಕಾಶ ಕಲ್ಪಿಸಿದ್ದು, ಬೆಳಿಗ್ಗೆಯಿಂದ ಸಂಜೆವರೆಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ತುರ್ತು ಸಂದರ್ಭದಲ್ಲಿ ಪಾಣತ್ತೂರು, ಸುಳ್ಯಕ್ಕೆ ತೆರಳಲು ಅವಕಾಶವಿರುತ್ತದೆ.

ಚಿಕಿತ್ಸೆಗೆ ಹೊರಜಿಲ್ಲೆಗೆ : ಗ್ರಾಮದ ಆರೋಗ್ಯ ವಿಸ್ತರಣಾ ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ವೈದ್ಯರು ಒಂದು ವಾರ ರಜೆಯಲ್ಲಿ ತೆರಳಿದ್ದು, ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆಯಲು ಗ್ರಾಮಸ್ಥರು ಪಾಣತ್ತೂರು, ಭಾಗಮಂಡಲ, ಸುಳ್ಯಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಇಬ್ಬರು ದಾದಿಯರು ಹಾಗೂ ಓರ್ವ ಆಯಾ ಮಾತ್ರ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯದಲ್ಲಿ ಇದ್ದಾರೆ. ಪಾಸಿಟಿವ್ ಪತ್ತೆಯಾದ ಮನೆಗಳಿಗೆ ಆಶಾ ಕಾರ್ಯಕರ್ತೆಯರು ತೆರಳಿ ಉಳಿದ ಸದಸ್ಯರ ಮಾದರಿ ಸಂಗ್ರಹ ಮಾಡುತ್ತಿದ್ದು, ಗುಡ್ಡಗಾಡು ಪ್ರದೇಶ ಮತ್ತು ಮಳೆಯ ಕಾರಣ ಸಿಬ್ಬಂದಿಗಳು ಕರ್ತವ್ಯಕ್ಕೆ

(ಮೊದಲ ಪುಟದಿಂದ) ತೆರಳಲು ಜೀಪನ್ನೆ ಅವಲಂಬಿಸಬೇಕಾಗಿದೆ. ಕೆಲವು ಕಡೆ ನಡೆದುಕೊಂಡು ಹೋಗಬೇಕಾಗಿದೆ. ಕೂಡಲೇ ಜಿಲ್ಲಾಡಳಿತ ಆರೋಗ್ಯ ಸಿಬ್ಬಂದಿಗಳು ಗ್ರಾಮದಲ್ಲಿ ಕರ್ತವ್ಯಕ್ಕೆ ಓಡಾಡಲು ಜೀಪಿನ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಜಿಲ್ಲಾ ಕೇಂದ್ರದಿAದ ದೂರದಲ್ಲಿರುವ ಈ ಗ್ರಾಮದಲ್ಲಿ ಕೊರೊನಾ ಎರಡನೆಯ ಅಲೆ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಮೂರನೇ ಅಲೆ ಬರುವ ಮೊದಲೇ ಜಿಲ್ಲಾಡಳಿತ ರೋಗ ನಿಯಂತ್ರಣಕ್ಕೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕಿದೆ.

ಚಿತ್ರ -ವರದಿ : ಸುನಿಲ್ ಕುಯ್ಯಮುಡಿ, ಸುಧೀರ್ ಹೊದ್ದೆಟ್ಟಿ