ಕಣಿವೆ, ಜು. ೮: ಸಾರ್ವಜನಿಕ ಉದ್ದೇಶಕ್ಕೆಂದು ಸರ್ಕಾರಗಳು ವ್ಯಯ ಮಾಡಿ ನಿರ್ಮಿಸುವ ಕೋಟಿ ಕೋಟಿ ರೂಪಾಯಿಗಳ ಸರ್ಕಾರಿ ಕಟ್ಟಡಗಳು ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ಅನೈತಿಕ ಚಟುವಟಿಕೆಗಳ ತಾಣಗಳಾಗುತ್ತಿವೆ.

ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿಂಭಾಗದ ಕಾಲೇಜು ಶಿಕ್ಷಣ ಇಲಾಖೆಯ ಅಧೀನದಲ್ಲಿನ ಜಾಗದಲ್ಲಿ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಮಹದುದ್ದೇಶದಿಂದ ಕಳೆದ ನಾಲ್ಕು ವರ್ಷಗಳ ಹಿಂದೆ ನಿರ್ಮಿಸಿದ ವಿಶಾಲ ವಿಸ್ತೀರ್ಣದ ಈ ಹಾಸ್ಟೆಲ್ ಕಟ್ಟಡ ನಿರ್ವಹಣೆಯ ಕೊರತೆಯಿಂದಾಗಿ ಇಂದು ಪುಂಡ ಪೋಕರಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.

ಅಂದರೆ ಅರ್ಥಾತ್ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಹೇಗೆ ಎಂದರೆ ಈ ಕಟ್ಟಡದ ಸುತ್ತಲೂ ಪಾರ್ಥೇನಿಯಂನAತಹ ಕಾಡು ಬಳ್ಳಿಗಳು ಆಳೆತ್ತರಕ್ಕೆ ಬೆಳೆದ ಪರಿಣಾಮ ಇಲ್ಲಿಗೆ ತೆರಳುವ ಯಾರೊಬ್ಬರು ಯಾರಿಗೂ ಕಾಣಿಸದ ಕಾರಣ ಇದು ಮದ್ಯವ್ಯಸನಿಗಳಿಗೆ ಹೇಳಿಮಾಡಿಸಿದ ಜಾಗ ಎಂದು ಇಲ್ಲಿ ರಾಶಿ ರಾಶಿಯಾಗಿ ಬಿದ್ದಿರುವ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಲೇಪಿತ ಕವರುಗಳು ಹಾಗೂ ಸಿಗರೇಟು ಮೋಟುಗಳು ಹೇಳುತ್ತಿವೆ.

ಈ ಕಟ್ಟಡದ ಸುತ್ತಲೂ ಇರುವ ಕಿಟಕಿಗಳಿಗೆ ಅಳವಡಿಸಿದ್ದ ಗಾಜುಗಳಿಗೆ ಪುಂಡ ಪೋಕರಿಗಳು ಕಲ್ಲೆಸೆದು ಒಡೆದು ಹಾಕಿರುವುದು ಒಂದೆಡೆ ಕಂಡು ಬಂದರೆ, ಕಿಟಕಿ ಬಾಗಿಲುಗಳನ್ನು ಬಿಚ್ಚಿಕದ್ದು ಸಾಗಿಸುವ ಪ್ರಯತ್ನವೂ ಮತ್ತೊಂದೆಡೆ ಅಲ್ಲಲ್ಲಿ ಕಂಡು ಬರುತ್ತಿದೆ. ಇನ್ನು ಈ ಕಟ್ಟಡಕ್ಕೆ ಅಳವಡಿಸಿರುವ ವಿದ್ಯುತ್ ಸಂಪರ್ಕದ ಕೇಬಲ್‌ಗಳನ್ನು ಕತ್ತರಿಸಿರುವ ಪೋಕರಿಗಳು ಈ ಕಟ್ಟಡದ ಹೊರ ಭಾಗದಲ್ಲಿ ಅಳವಡಿಸಿದ್ದ ಬಲ್ಬ್ಗಳನ್ನು ಹುಡಿಗೈದಿದ್ದಾರೆ.

ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಲೆಂದು ಕಾಲೇಜು ಶಿಕ್ಷಣ ಇಲಾಖೆಯ ಅನುದಾನದಿಂದ ನಿರ್ಮಿತವಾದ ಈ ಕಟ್ಟಡ ಮೂಲ ಉದ್ದೇಶಕ್ಕೆ ಈವರೆಗೂ ಬಳಕೆಯಾಗಲೇ ಇಲ್ಲ ಎಂಬುದು ವಿಷಾದನೀಯ ವಿಚಾರ. ಕಾಲೇಜು ಶಿಕ್ಷಣ ಇಲಾಖೆಯವರು ಈ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಕಾಲೇಜು ಪ್ರಾಂಶುಪಾಲರಿAದ ಇಲಾಖೆಗೆ ಹಲವು ಬಾರಿ ಪ್ರಸ್ತಾವನೆಯೂ ಹೋಗಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ಸಂಭವಿಸುತ್ತಿದ್ದ ಜಲಪ್ರವಾಹ, ಭೂಕುಸಿತದಂತಹ ಪ್ರಕೃತಿ ವಿಕೋಪಗಳಿಂದಾಗಿ ಕಟ್ಟಡದ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ.

ಹಾಗಾಗಿ ಈ ಕಟ್ಟಡದ ಕಾಮಗಾರಿ ಪೂರ್ಣಗೊಂಡ ಸಮಯದಲ್ಲಿ ಅಂದರೆ ೨೦೧೮ರ ಆಗಸ್ಟ್ನಲ್ಲಿ ಕೊಡಗಿನಲ್ಲಿ ಸಂಭವಿಸಿದ ಜಲ ಪ್ರಳಯದಿಂದಾಗಿ ಆಸ್ತಿ ಪಾಸ್ತಿ ಕಳೆದುಕೊಂಡು ನಿರಾಶ್ರಿತರಾದ ನೂರಾರು ಮಂದಿಗೆ ಇದೇ ಕಟ್ಟಡದಲ್ಲಿ ಆಶ್ರಯ ಒದಗಿಸಲಾಗಿತ್ತು. ಬಳಿಕ ಸರಿಯಾದ ನಿರ್ವಹಣೆ ಇಲ್ಲದೇ ಈ ಕಟ್ಟಡ ಇಂದು ಕಾಡು ಪಾಲಾಗುವ ಸ್ಥಿತಿ ತಲುಪಿದೆ.

ದುಷ್ಕರ್ಮಿಗಳ ಅಡ್ಡೆಯಾಗಿರುವ ಈ ಕಟ್ಟಡದ ಆಸುಪಾಸಿನಲ್ಲಿ ಜನವಸತಿ ಪ್ರದೇಶವಿದ್ದು ಅಲ್ಲಿನ ನಿವಾಸಿಗಳು ಈ ಕಟ್ಟಡದ ನಿರ್ವಹಣೆಗೆ ಜಿಲ್ಲಾಡಳಿತವನ್ನು ಕೋರಿದ್ದು, ಪಾಳುಬಿದ್ದ ಈ ಕಟ್ಟಡದ ಬಳಿ ಪ್ರತಿನಿತ್ಯ ಸಂಜೆ ಹಾಗೂ ರಾತ್ರಿ ನಡೆವ ಪುಂಡಾಟಿಕೆಯನ್ನು ಹತ್ತಿಕ್ಕಬೇಕೆಂದು ಕೂಡ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ಇದೇ ಪಾಳುಬಿದ್ದ ಕಟ್ಟಡದ ಬಳಿ ಡಾ. ಅಂಬೇಡ್ಕರ್ ಭವನ ಹಾಗೂ ವಾಲ್ಮೀಕಿ ಭವನ ಎಂಬ ಮತ್ತೆರಡು ಸರ್ಕಾರಿ ಭವನಗಳಿಗೂ ಕೂಡ ಸೂಕ್ತ ರಕ್ಷಣೆ ಇಲ್ಲವಾಗಿದೆ.

ಒಂದೇ ಜಾಗದಲ್ಲಿನ ಈ ಮೂರು ಕಟ್ಟಡಗಳು ಸ್ಥಳೀಯ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿರುವುದರಿಂದ ಪಂಚಾಯಿತಿ ಈ ಕಟ್ಟಡಗಳನ್ನು ಸಂರಕ್ಷಿಸುವ ಜವಾಬ್ದಾರಿ ತೆಗೆದುಕೊಂಡರೆ ಮಾತ್ರ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿ ನಿರ್ಮಿಸಿರುವ ಈ ಕಟ್ಟಡಗಳನ್ನು ನಿರ್ವಹಿಸಬಹುದಾಗಿದೆ. - ಕೆ.ಎಸ್. ಮೂರ್ತಿ