*ಗೋಣಿಕೊಪ್ಪ, ಜು. ೮: ತಿತಿಮತಿ ಅರಣ್ಯ ಪ್ರದೇಶಕ್ಕೆ ಹಲಸಿನ ಬೀಜಗಳನ್ನು ಬಿತ್ತುವ ಮೂಲಕ ಅರಣ್ಯ ಪ್ರದೇಶವನ್ನು ಮತ್ತಷ್ಟು ಹಸಿರೀಕರಣಗೊಳಿಸಲು ಗೋಣಿಕೊಪ್ಪ ಸಮೀಪದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಮಣಿ ಮತ್ತು ಸ್ನೇಹಿತರ ತಂಡ ಮುಂದಾಗಿದೆ.

ತಿತಿಮತಿ ದೇವಮಚ್ಚಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರ ಪಡೆದು, ಮೊಳಕೆ ಒಡೆಯುವ ಸಾಮರ್ಥ್ಯವುಳ್ಳ ೩೦೦ಕ್ಕೂ ಹೆಚ್ಚು ಬೀಜಗಳನ್ನು ಹಾಕಲಾಗಿವೆ. ಮರ, ಗಿಡಗಳು ವಿರಳವಾಗಿದ್ದ ಕುರುಚಲು ಪ್ರದೇಶವನ್ನು ಬಿತ್ತನೆ ಕಾರ್ಯಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ನೇಹಿತರ ತಂಡಕ್ಕೆ ಅನುಕೂಲ ಮಾಡಿಕೊಟ್ಟ ಕಾರಣ ಮಳೆಯಿಂದ ಮೆದುವಾಗಿದ್ದ ಮಣ್ಣಿನ ಪ್ರದೇಶದಲ್ಲಿ ಅಂತರದೊAದಿಗೆ ಬೀಜ ಹಾಕಲಾಗಿದೆ. ಕಳೆದ ೬ ದಿನಗಳ ಹಿಂದೆ ಸಂಗ್ರಹಿಸಿದ ಹಲಸಿನ ಹಣ್ಣಿನ ಬೀಜಗಳನ್ನು ಶೇಖರಿಸಿ ಸಾವಯವ ಗೊಬ್ಬರದ ಮಣ್ಣನ್ನು ಬಳಸಿ ಹಣ್ಣಿನ ಬೀಜಕ್ಕೆ ಮಿಶ್ರಣ ಮಾಡಿ ಉಂಡೆಗಳನ್ನಾಗಿ ಪರಿವರ್ತಿಸಿ ಬಿಸಿಲಿನಲ್ಲಿ ಒಣಗಿಸಲಾಗಿತ್ತು.

ಈ ಉಂಡೆಗಳು ಮಳೆಯ ಹನಿ ಬಿದ್ದೊಡನೆ ತೇವಾಂಶಗೊAಡು ಅತೀ ಶೀಘ್ರದಲ್ಲಿ ಮೊಳಕೆಯೊಡೆಯುತ್ತದೆ. ಅಲ್ಲದೇ ಕಾಡಿನಲ್ಲಿ ಪಸರಿಸಿದ ಹಣ್ಣಿನ ಬೀಜಗಳನ್ನು ಪ್ರಾಣಿ ಪಕ್ಷಿಗಳು ತಿನ್ನುವುದರಿಂದ ರಕ್ಷಿಸಲು ಸಹಕಾರಿಯಾಗುತ್ತದೆ. ಸ್ನೇಹಿತರ ತಂಡದ ಈ ಮಹತ್ವದ ಕಾರ್ಯವನ್ನು ಶ್ಲಾಘಿಸಿದ ವಲಯ ಅರಣ್ಯಾಧಿಕಾರಿ ಅಶೋಕ್ ಹನುಗುಂದ ಅವರು ಹಲಸಿನ ಹಣ್ಣಿನ ಬೀಜ ಎರೆಚುವ ಸಂದರ್ಭ ಸ್ಥಳದಲ್ಲಿದ್ದು, ತಂಡಕ್ಕೆ ಮಾರ್ಗದರ್ಶನ ಮಾಡಿದರು.

ಈ ಸಂದರ್ಭ ಮಾತನಾಡಿದ ಸ್ನೇಹಿತರ ತಂಡದ ನಾಯಕ ಮಣಿ, ಹಲಸಿನ ಬೀಜದುಂಡೆಗಳನ್ನು ಸಾವಯವ ಗೊಬ್ಬರ ಬಳಸಿ ತಯಾರಿಸಲಾಗಿದೆ. ಮುಂದಿನ ತಲೆಮಾರಿಗೆ ಶುದ್ಧ ಪರಿಸರವನ್ನು ಒದಗಿಸಿಕೊಡಬೇಕು ಮತ್ತು ಸುತ್ತಲಿನ ವಾತಾವರಣವನ್ನು ಹಸಿರುಗೊಳಿಸಬೇಕೆಂಬ ಕಾರಣವನ್ನು ಮುಂದಿಟ್ಟು ಬೀಜದುಂಡೆಗಳನ್ನು ತಯಾರಿಸಿ ಅರಣ್ಯದಲ್ಲಿ ಬಿತ್ತು ಕಾರ್ಯಕ್ಕೆ ಮುಂದಾಗಿದ್ದೇನೆ. ಮುಂದಿನ ದಿನಗಳಲ್ಲಿಯೂ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಇತರ ಹಣ್ಣಿನ ಬೀಜಗಳನ್ನು ಕಾಡಿನಲ್ಲಿ ಬಿತ್ತುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು. - ಎನ್.ಎನ್. ದಿನೇಶ್