ಮಡಿಕೇರಿ, ಜು. ೯: ಕುಶಾಲನಗರ ತಾಲೂಕು ರಚನೆಯಲ್ಲಿ ಜಿಲ್ಲೆಯ ಶಾಸಕ ಅಪ್ಪಚ್ಚು ರಂಜನ್ ಅವರ ಪರಿಶ್ರಮವೇ ಹೆಚ್ಚು ಎಂದಾದರೆ ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಸಿದ್ಧರಾಗಲಿ ಎಂದು ಕುಶಾಲನಗರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪ್ರಮುಖ ವಿ.ಪಿ. ಶಶಿಧರ್ ಸವಾಲು ಹಾಕಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರ ತಾಲೂಕು ರಚನೆ ದಶಕಗಳ ಕನಸಾಗಿದ್ದು, ಅದರ ಹಿಂದೆ ಕುಶಾಲನಗರ ತಾಲೂಕು ಹೋರಾಟ ಸಮಿತಿಯ ನಿರಂತರ ಶ್ರಮವಿದೆ; ಅರ್ಥಪೂರ್ಣ ಹೋರಾಟ ನಡೆಸಿ ಯಶಸ್ಸು ಕಂಡಿದ್ದೇವೆ. ಆದರೆ ಸಮಿತಿಯ ಹೋರಾಟವನ್ನು ಶಾಸಕರು ಕಡೆಗಣಿಸಿ ತಾಲೂಕು ರಚನೆಯಲ್ಲಿ ತಾವೇ ಪ್ರಮುಖ ಪಾತ್ರ ವಹಿಸಿದಂತೆ ತೋರ್ಪಡಿಸಿಕೊಂಡಿರುವುದು ನಾಚಿಕೆಗೇಡಿನ ವಿಚಾರ ಎಂದು ಟೀಕಿಸಿದರು.
೨೦೧೩ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅಪ್ಪಚ್ಚು ರಂಜನ್ ಅವರು ಕೊಡಗು ಜಿಲ್ಲಾ ಉಸ್ತುವಾರಿ
(ಮೊದಲ ಪುಟದಿಂದ) ಸಚಿವರು ಹಾಗೂ ಕ್ರೀಡಾ ಸಚಿವರಾಗಿದ್ದರು. ಆಸಕ್ತಿ ಇದ್ದಿದ್ದರೆ ಅದೇ ವೇಳೆಯಲ್ಲಿ ಕುಶಾಲನಗರ ತಾಲೂಕು ರಚನೆಗೆ ಪ್ರಯತ್ನಿಸುತ್ತಿದ್ದರು. ಆದರೆ ಕುಶಾಲನಗರ ತಾಲೂಕು ರಚನೆ ಇರಲಿ, ಮಾದಾಪುರವನ್ನು ಹೋಬಳಿಯನ್ನಾಗಿ ಮಾಡಲು ಅವರಿಂದ ಸಾಧ್ಯವಾಗಿಲ್ಲ. ಹೀಗಿದ್ದಾಗ ತಾಲೂಕು ರಚನೆಯಲ್ಲಿ ಬೇರೆಯವರ ಪರಿಶ್ರಮವನ್ನು ತಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆAದರು.
ಅಪ್ಪಚ್ಚು ರಂಜನ್ ಅವರ ಪ್ರಯತ್ನದ ಫಲವಾಗಿಯೇ ಕುಶಾಲನಗರ ತಾಲೂಕು ರಚನೆಯಾಗಿದ್ದಾದಲ್ಲಿ ಸಂಪೂರ್ಣ ದಾಖಲೆಗಳೊಂದಿಗೆ ಬಹಿರಂಗ ಚರ್ಚೆಗೆ ಬರಲಿ. ಹೋರಾಟ ಸಮಿತಿಯೂ ದಾಖಲೆಗಳೊಂದಿಗೆ ಚರ್ಚೆಗೆ ಸಿದ್ಧ ಎಂದು ಸವಾಲೆಸೆದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕುಶಾಲನಗರ ತಾಲೂಕು ಹೋರಾಟ ಸಮಿತಿಯು ಸತತ ೨೦ ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದ್ದು, ನೂತನ ತಾಲೂಕು ಅಸ್ತಿತ್ವಕ್ಕೆ ಬಂದಿದೆ. ಆದರೆ ಕುಶಾಲನಗರದಲ್ಲಿ ನಡೆದ ಸಭಾ ಕಾರ್ಯಕ್ರಮದ ವೇದಿಕೆಗೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ, ಹೋರಾಟ ಸಮಿತಿಯ ಪ್ರಮುಖರಾದ ವಿ.ಪಿ ಶಶಿಧರ್ ಅವರನ್ನು ಆಹ್ವಾನಿಸದೆ ನಿರ್ಲಕ್ಷಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಕೆ.ಪಿ ಚಂದ್ರಕಲಾ ಅವರು ಸಚಿವರ ಎದುರು ಪ್ರಸ್ತಾಪಿಸಿದಾಗ ವೇದಿಕೆಯಲ್ಲಿದ್ದ ಶಾಸಕ ಅಪ್ಪಚ್ಚು ರಂಜನ್ ಎದ್ದು ನಿಂತು ತಾಲೂಕು ರಚನೆಯಲ್ಲಿ ನಿಮ್ಮ ಕೊಡುಗೆ ಏನೂ ಇಲ್ಲ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷದವರನ್ನು ಹೊರಗಟ್ಟುವ ಕೆಲಸ ಮಾಡಿದ್ದಾರೆ. ಪೊಲೀಸರು, ಅಧಿಕಾರಿಗಳು ದೌರ್ಜನ್ಯ ನಡೆಸಿದ್ದಾರೆ. ಇದನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದರು. ಸುದಿಗೋಷ್ಠಿಯಲ್ಲಿ ಕೆಪಿಸಿಸಿ ಸಂವಾಹನ ಕಾರ್ಯದರ್ಶಿ ಟಿ.ಪಿ. ರಮೇಶ್, ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಸಂಯೋಜಕರಾದ ಮಂಜುನಾಥ್, ನಂದಕುಮಾರ್ ಹಾಜರಿದ್ದರು.