ಗೋಣಿಕೊಪ್ಪಲು, ಜು. ೮: ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಪ್ರತಿನಿತ್ಯ ಟ್ರಾಫಿಕ್ ವ್ಯವಸ್ಥೆ ಬಗ್ಗೆ ಚರ್ಚೆ ಹೆಚ್ಚಾಗಿ ನಡೆಯುತ್ತಿದೆ.

ಇದೀಗ ಗೋಣಿಕೊಪ್ಪ ನಗರದ ಪೊನ್ನಂಪೇಟೆ ಜಂಕ್ಷನ್ ರಸ್ತೆಯ ಸ್ಟಾರ್ ಎಲೆಕ್ಟಿçಕ್ ಮುಂಭಾಗದಲ್ಲಿ ಇದ್ದ ನಿಲುಗಡೆ ವ್ಯವಸ್ಥೆಯನ್ನು ಹೆಚ್ಚಿನ ವಾಹನಗಳು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಸುಗಮ ಸಂಚಾರದ ದೃಷ್ಟಿಯಿಂದ ಪೊಲೀಸರು ರದ್ದುಗೊಳಿಸಿದ್ದರು.

ಇದರಿಂದಾಗಿ ಈ ಭಾಗದಲ್ಲಿ ಇರುವ ಅಂಗಡಿಗಳಿಗೆ ವ್ಯಾಪಾರಕ್ಕೆ ಕಷ್ಟವಾಗಿದ್ದು, ಈ ಬಗ್ಗೆ ಅಲ್ಲಿನ ವರ್ತಕರು ಚೇಂಬರ್‌ಗೆ ಮನವಿ ಸಲ್ಲಿಸಿ ಈ ಹಿಂದೆ ಇದ್ದ ಹಾಗೇ ಪಾರ್ಕಿಂಗ್ ನೀಡುವಂತೆ ಕೋರಿದ್ದರು. ಇದರಂತೆ ವರ್ತಕರ ಹಿತದೃಷ್ಟಿಯಿಂದ ಚೇಂಬರ್ ಆಫ್ ಕಾರ್ಮಸ್ ಸ್ಥಾನೀಯ ಸಮಿತಿಯ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಮುಂದಾಳತ್ವದಲ್ಲಿ ಗೋಣಿಕೊಪ್ಪಲುವಿನ ಸರ್ಕಲ್ ಇನ್ಸ್ಪೆಕ್ಟರ್ ಜಯರಾಂ ಅವರನ್ನು ಚೇಂಬರ್ ಮೂಲಕ ಭೇಟಿ ಮಾಡಿ ವಸ್ತುಸ್ಥಿತಿಯ ಬಗ್ಗೆ ಗಮನಸೆಳೆಯಲಾಯಿತು.

ಸಾರ್ವಜನಿಕರ ಹಿತದೃಷ್ಟಿಯಿಂದ ತಾತ್ಕಾಲಿಕ ವ್ಯವಸ್ಥೆಯಡಿ ಬದಲಾವಣೆ ಮಾಡಲಾಗಿದೆ. ಮುಂದೆ ಕೋವಿಡ್ ಮುಗಿದ ನಂತರ ಯಥಾಸ್ಥಿತಿ ಕಾಪಾಡಲಾಗುತ್ತದೆ. ಅಲ್ಲಿಯವರೆಗೂ ವರ್ತಕರು ಇಲಾಖೆಯೊಂದಿಗೆ ಸಹಕರಿಸುವಂತೆ ಅಧಿಕಾರಿ ತಿಳಿಸಿದರು.

ಅಧಿಕಾರಿಗಳ ಮಾತಿಗೆ ಒಪ್ಪಿದ ಚೇಂಬರ್ ಆಫ್ ಕಾಮರ್ಸ್ನ ಪದಾಧಿಕಾರಿಗಳು ಸಮ್ಮತಿ ಸೂಚಿಸಿದರು. ಚೇಂಬರ್‌ನ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಕಾರ್ಯದರ್ಶಿ ತೆಕ್ಕಡ ಕಾಶಿ, ಸದಸ್ಯರಾದ ಪಿ.ಎಂ. ಸ್ಟೋರ್ ಮಹಮ್ಮದ್, ನವೀದ್ ಉಪಸ್ಥಿತರಿದ್ದರು.