ಮಡಿಕೇರಿ, ಜು. ೯: ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಬಾಣೆ ಗ್ರಾಮದ ರಸ್ತೆ ದುರಸ್ತಿಪಡಿಸದಿದ್ದಲ್ಲಿ ಮುಂಬರುವ ಎಲ್ಲಾ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಆರ್ಜಿ ಗ್ರಾಮ ಪಂಚಾಯ್ತಿ ಸದಸ್ಯ ಕೆ.ಟಿ.ಬಷೀರ್ ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲುಬಾಣೆ ಗ್ರಾಮದಲ್ಲಿ ಸುಮಾರು ೩೫೦ ಮನೆಗಳಿವೆ. ಗ್ರಾಮಕ್ಕೆ ತೆರಳುವ ರಸ್ತೆ ಕಿರಿದಾಗಿದ್ದು, ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಯೋಗ್ಯವಲ್ಲದಂತಾಗಿದೆ. ರಸ್ತೆಯ ದುರಸ್ತಿಗಾಗಿ ಕಳೆದ ಹಲವಾರು ವರ್ಷಗಳಿಂದ ಜನಪ್ರತಿನಿಧಿಗಳ ಮೂಲಕ ಸರ್ಕಾರದ ಗಮನ ಸೆಳೆಯಲಾಗಿದೆ. ಆದರೂ ಸ್ಥಳೀಯ ಶಾಸಕರಾಗಲಿ ಇತರ ಜನಪ್ರತಿನಿಧಿಗಳಾಗಲಿ ಇದುವರೆಗೂ ಮನವಿಗೆ ಸ್ಪಂದಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ರಸ್ತೆ ದುರಸ್ತಿ ಕೈಗೊಳ್ಳದಿದ್ದಲ್ಲಿ ಮುಂಬರುವ ಎಲ್ಲಾ ತಾ.ಪಂ, ಜಿ.ಪಂ, ಎಂಎಲ್‌ಸಿ, ಎಂಎಲ್‌ಎ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದರು.
ಕಳೆದ ಎರಡು ತಿಂಗಳ ಹಿಂದೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯರವರು ರೂ. ೫ ಲಕ್ಷ ವೆಚ್ಚದಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಸುವುದಾಗಿ ಭರವಸೆ ನೀಡಿ ಭೂಮಿ ಪೂಜೆ ನೆರವೇರಿಸಿದ್ದರು. ನಂತರ ರಸ್ತೆ ದುರಸ್ತಿ ಕಾರ್ಯ ನಡೆಸದೇ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ರಸ್ತೆ ಮತ್ತಷ್ಟು ಹದಗೆಡುವ ಸಂಭವಿಸಿದೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಕಾಂಕ್ರಿಟ್ ರಸ್ತೆ ಮಾಡಲು ಸಾಧ್ಯವಾಗದಿದ್ದರೂ ಡಾಂಬರು ರಸ್ತೆಯನ್ನಾದರೂ ಮಾಡುವಂತೆ ಮನವಿ ಮಾಡಿದರು. ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ಮಾತನಾಡಿದರು. ಗೋಷ್ಠಿಯಲ್ಲಿ ಆರ್ಜಿ ಗ್ರಾ.ಪಂ. ಸದಸ್ಯರಾದ ಶಹದೀರ್ ಆಲಿ, ಫಾತಿಮಾ ಉಪಸ್ಥಿತರಿದ್ದರು.