ಕಣಿವೆ, ಜು. ೯ : ಬಸ್ ನಲ್ಲಿದ್ದ ಕಾಲೇಜು ವಿದ್ಯಾರ್ಥಿಯೋರ್ವನ ಬಳಿ ‘ಕರೆ ಮಾಡಿ ಕೊಡುತ್ತೇನೆ’ ಎಂದು ಮೊಬೈಲ್ ಅನ್ನು ಕೇಳಿಕೊಂಡು ಮಾತನಾಡುವ ನಾಟಕ ಆಡಿಕೊಂಡು ಬಸ್‌ನಿಂದ ಕೆಳಗಿಳಿದು ಮೊಬೈಲ್ ಹೊತ್ತೊಯ್ದಿರುವ ಘಟನೆ ಬುಧವಾರ ನಡೆದಿದೆ.
ಸೋಮವಾರಪೇಟೆ ನಿವಾಸಿ ಜಿ.ಎಸ್.ಪರಮೇಶ ಎಂಬವರ ಪುತ್ರ, ದ್ವಿತೀಯ ಪಿಯುಸಿ ವಿದ್ಯಾರ್ಥಿ ಬೇವನ್ ಎಂಬಾತ ಮೈಸೂರಿನಿಂದ ಸೋಮವಾರಪೇಟೆಯ ತನ್ನ ಮನೆಗೆ ಬರಲು ರಾಜ್ಯ ಸಾರಿಗೆ ಬಸ್ ಹತ್ತಿ ಕುಳಿತಿದ್ದಾಗ, ಪಕ್ಕದಲ್ಲೇ ಬಂದು ಕುಳಿತ ಆಗಂತುಕ, ಆಸನದಲ್ಲಿ ಬ್ಯಾಗ್ ಒಂದನ್ನು ಇಟ್ಟು ‘ಸರ್ ಒಂದು ಕರೆ ಮಾಡಿ ಕೊಡುತ್ತೇನೆ. ಈ ಬ್ಯಾಗ್ ಇಲ್ಲೇ ಇರಲಿ. ನಿಮ್ಮ ಮೊಬೈಲ್ ಒಂದು ನಿಮಿಷ ಕೊಡಿ’ ಎಂದು ಕೇಳಿದವ ಮಾತನಾಡುವ ನಾಟಕ ಆಡುತ್ತಾ ಬಸ್‌ನಿಂದ ಕೆಳಗಿಳಿದು ಮೊಬೈಲ್ ಹೊತ್ತು ಪರಾರಿಯಾಗಿದ್ದಾನೆ. ಆನ್ ಲೈನ್ ತರಗತಿಗೆಂದು ಇತ್ತೀಚೆಗಷ್ಟೇ ರೂ ೧೫ ಸಾವಿರ ಕೊಟ್ಟು ಮೊಬೈಲ್ ಖರೀದಿಸಲಾಗಿತ್ತು ಎಂದು ವಿದ್ಯಾರ್ಥಿ ಪೋಷಕ ಪರಮೇಶ್ ಹೇಳಿದ್ದಾರೆ. ಮೊಬೈಲ್ ಅನ್ನು ಹೀಗೂ ಪಡೆದು ಪರಾರಿಯಾಗುವ ಕಳ್ಳರು ಇದ್ದಾರೆ. ಈ ಬಗ್ಗೆ ಮಕ್ಕಳು, ಪೋಷಕರು ಹಾಗೂ ಸಾರ್ವಜನಿಕರು ಎಚ್ಚರವಹಿಸಬೇಕಿದೆ. - ಮೂರ್ತಿ