ಸೋಮವಾರಪೇಟೆ, ಜು.೯: ಪಟ್ಟಣದ ಮಾರುಕಟ್ಟೆ ಪ್ರಾಂಗಣದಲ್ಲಿ ನೇಣು ಬಿಗಿದುಕೊಂಡು ಕಾರ್ಮಿಕ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಸಂಜೆ ಸಂಭವಿಸಿದೆ. ಪಟ್ಟಣ ಸಮೀಪದ ಗಾಂಧಿನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದ ಮಂಜ (ಮಾರ್ಕೆಟ್ ಮಂಜ-೩೬) ಎಂಬಾತನೇ ಸಾವಿಗೆ ಶರಣಾದವನು. ಪಟ್ಟಣದ ವಿವಿಧ ಕೋಳಿ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜ, ಇಂದು ಸಂಜೆ ಕತ್ತಲಾಗುತ್ತಿದ್ದಂತೆ ಮಾರುಕಟ್ಟೆಗೆ ಆಗಮಿಸಿ ಚಾವಣಿಗೆ ಅಳವಡಿಸಿದ್ದ ಕಬ್ಬಿಣದ ರಾಡ್ ಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾನೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸೋಮವಾರಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ.