ಸೋಮವಾರಪೇಟೆ, ಜು.೯: ತಾಲೂಕಿನ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ರುವ ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ದುಂಡಳ್ಳಿ ಗ್ರಾಮದಲ್ಲಿ ದಲಿತರಿಗೆ ನಿವೇಶನ ನೀಡಲೆಂದು ಪೈಸಾರಿ ಜಾಗ ಸರ್ವೆಗೆ ಆಗಮಿಸಿದ ಇಲಾಖಾಧಿಕಾರಿಗಳಿಗೆ ಸ್ಥಳೀಯ ಕೆಲವರು ತಡೆಯೊಡ್ಡಿರುವ ಘಟನೆ ಖಂಡನೀಯ. ತಕ್ಷಣ ಪೊಲೀಸ್ ಬಂದೋಬಸ್ತ್ನೊAದಿಗೆ ಸರ್ವೆ ನಡೆಸಿ ದಲಿತರಿಗೆ ನಿವೇಶನ ಒದಗಿಸಬೇಕೆಂದು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಜೆ.ಆರ್. ಪಾಲಾಕ್ಷ ಅವರು, ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದ್ರೆ ದುಂಡಳ್ಳಿ ಗ್ರಾಮದ ಸ.ನಂ.೨೧/೨ರಲ್ಲಿ ೧೫೯ ಏಕರೆ ಪೈಸಾರಿ ಜಾಗವಿದ್ದು, ಇದರಲ್ಲಿ ನಿವೇಶನ ರಹಿತ ದಲಿತರಿಗೆ ನಿವೇಶನ ಒದಗಿಸಲು ಕ್ರಮ ವಹಿಸುವಂತೆ ಈ ಹಿಂದೆಯೇ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿ ಗಳು, ತಾಲೂಕು ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿತ್ತು.
ಅದರಂತೆ ಸಮಾಜಕಲ್ಯಾಣ ಅಧಿಕಾರಿ, ರಾಜಸ್ವ ನಿರೀಕ್ಷಕರು ಖುದ್ದು ಸ್ಥಳ ಪರಿಶೀಲನೆ ನಡೆಸಿ, ೧೫೯ ಏಕರೆ ಪ್ರದೇಶದಲ್ಲಿ ೩೦ ಏಕರೆ ಪ್ರದೇಶವನ್ನು ನಿವೇಶನಕ್ಕಾಗಿ ಕಾಯ್ದಿರಿಸಲು ಆದೇಶ ನೀಡಿದ್ದು, ಅದರಂತೆ ನಿನ್ನೆ ದಿನ ಸರ್ವೆಗೆ ಆಗಮಿಸಿದ ಸರ್ವೆ ಇಲಾಖೆಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಕಂದಾಯ ಇಲಾಖಾಧಿಕಾರಿಗಳಿಗೆ ಸ್ಥಳೀಯ ಕೆಲವರು ತಡೆಯೊಡ್ಡಿದ್ದು, ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿದರು.
ದುಂಡಳ್ಳಿ ಭಾಗದಲ್ಲಿ ೬೦ಕ್ಕೂ ಅಧಿಕ ದಲಿತ ಕುಟುಂಬಗಳು ವಾಸವಿದ್ದು, ನಿವೇಶನ ಕೊರತೆಯಿಂದಾಗಿ ಒಂದೇ ಮನೆಯಲ್ಲಿ ೫ ರಿಂದ ೬ ಕುಟುಂಬ ಗಳಿವೆ. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ದಶಕಗಳೇ ಕಳೆದಿವೆ. ಇದೀಗ ನಿವೇಶನ ನೀಡಲು ಸರ್ಕಾರವೇ ಕ್ರಮ ವಹಿಸಿದ್ದರೂ ಸ್ಥಳೀಯ ಕೆಲವರು ಅಡ್ಡಿಪಡಿಸುವ ಮೂಲಕ ದಲಿತರಿಗೆ ಜಾಗ ದೊರಕದಂತೆ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ದರು. ದಲಿತರಿಗೆ ಜಾಗ ದೊರಕಿಸಿ ಕೊಡುವ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುವವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ೧೫ ದಿನಗಳ ಒಳಗೆ ಪೊಲೀಸ್ ಇಲಾಖೆಯ ಬಂದೋಬಸ್ತ್ನೊAದಿಗೆ ಜಾಗದ ಸರ್ವೆ ನಡೆಸಿ, ದಲಿತರಿಗೆ ನಿವೇಶನ ಒದಗಿಸಿಕೊಡಬೇಕೆಂದು ಪಾಲಾಕ್ಷ ಆಗ್ರಹಿಸಿದರು.
ದುಂಡಳ್ಳಿಯಲ್ಲಿ ದಲಿತರಿಗೆ ನಿವೇಶನ ಕೊಡದೇ ಹೋದರೆ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿಗಳು, ತಾಲೂಕು ತಹಶೀಲ್ದಾರ್ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕಿನ ೪೦ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗವನ್ನು ಸರ್ವೆ ಮಾಡಿ ಶೇ.೫೦ರಷ್ಟನ್ನು ಕಾಯ್ದಿರಿಸಿ, ನಿವೇಶನ ರಹಿತರಿಗೆ ನಿವೇಶನ ಹಂಚುವAತೆ ಸರ್ಕಾರದ ಆದೇಶವಿದ್ದರೂ ಅಧಿಕಾರಿ ಗಳು ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಗೋಷ್ಠಿಯಲ್ಲಿದ್ದ ಸಂಘಟನೆಯ ತಾಲೂಕು ಅಧ್ಯಕ್ಷ ಜೆ.ಎಲ್. ಜನಾರ್ಧನ್ ಆರೋಪಿಸಿದರು.
ಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಂ.ಎಸ್. ವೀರೇಂದ್ರ, ಖಜಾಂಚಿ ಕಾಂತರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ, ಶನಿವಾರಸಂತೆ ಹೋಬಳಿ ಅಧ್ಯಕ್ಷ ಶಿವಲಿಂಗು, ಮಾದ್ರೆ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಎಂ.ಎನ್. ಮಂಜುನಾಥ್ ಉಪಸ್ಥಿತರಿದ್ದರು.