ಕುಶಾಲನಗರ, ಜು. ೯: ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಎದುರಿಸಲು ವಾರ್ಡ್ ಮಟ್ಟದಿಂದ ತಯಾರಿ ನಡೆಸಬೇಕಾಗಿದೆ. ಈ ಮೂಲಕ ಮತ್ತೆ ಕೊಡಗು ಜಿಲ್ಲೆಯಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೊಡಗು ಕಾಂಗ್ರೆಸ್ ಉಸ್ತುವಾರಿ ರಘು ಆಚಾರ್ ಕರೆ ನೀಡಿದ್ದಾರೆ.
ಕುಶಾಲನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ, ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಹೊರೆ ಬೀಳುವಂತಾಗಿದೆ. ಈ ಬಗ್ಗೆ ಪ್ರತಿ ಮನೆ ಮನೆಗೆ ಮಾಹಿತಿ ನೀಡುವ ಜವಾಬ್ದಾರಿ ಕಾರ್ಯಕರ್ತರದ್ದಾಗಿದೆ ಎಂದರು. ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕುಶಾಲನಗರ ಬ್ಲಾಕ್‌ನಲ್ಲಿ ಉಂಟಾಗಿರುವ ಅಸಮಾಧಾನ ಸರಿಪಡಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು. ಕಾರ್ಯಕರ್ತರು ಮುಖಂಡರು ಒಟ್ಟಾಗಿ ಪಕ್ಷ ಬಲವರ್ಧನೆಗೆ ಕೈಜೋಡಿಸಬೇಕಾಗಿದೆ ಎಂದರು. ಜಿ.ಪಂ. ಮಾಜಿ ಸದಸ್ಯೆ ಕೆ.ಪಿ. ಚಂದ್ರಕಲಾ, ಕೆ.ಕೆ. ಮಂಜುನಾಥ್ ಕುಮಾರ್, ಕೆ.ಎಂ. ಲೋಕೇಶ್, ಬ್ಲಾಕ್ ಅಧ್ಯಕ್ಷ ಅನಂತಕುಮಾರ್, ಉಸ್ತುವಾರಿಗಳಾದ ಮಂಜುಳಾ ರಾಜ್, ಪ್ರದೀಪ್ ರೈ ಪಾಂಬಾರ್, ವೆಂಕಪ್ಪ ಗೌಡ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಪಕ್ಷದ ಬ್ಲಾಕ್ ಮಟ್ಟದಲ್ಲಿ ಪಕ್ಷದ ಆಂತರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಕೊಳ್ಳುವಂತೆ ಸೂಚನೆ ನೀಡಿದರು. ಇಲ್ಲದಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ಸಂದರ್ಭ ಕೆಪಿಸಿಸಿ ಸದಸ್ಯ ಟಿ.ಪಿ. ರಮೇಶ್, ಮಹಿಳಾ ಘಟಕದ ಸುರಯ್ಯ ಅಬ್ರಾರ್ ಅಲ್ಪಸಂಖ್ಯಾತ ಘಟಕದ ಉಸ್ಮಾನ್, ನಟೇಶ್ ಗೌಡ, ರಾಜಾ ರಾವ್, ವಕ್ತಾರ ಸುರೇಶ್ ನಗರ ಅಧ್ಯಕ್ಷ ಶರೀಫ್ ಇಬ್ರಾಹಿಂ ಮತ್ತಿತರರು ಇದ್ದರು.