ಕಾಲೂರಿನ ಬೆಳಕು ಬೊಳ್ಳಮ್ಮ ಪ್ರಥಮ
ಗೋಣಿಕೊಪ್ಪಲು, ಜು. ೯: ಪೊನ್ನಂಪೇಟೆ ತಾಲೂಕು ಜಾನಪದ ಪರಿಷತ್ ಆಶ್ರಯದಲ್ಲಿ ಜರುಗಿದ ಆನ್‌ಲೈನ್ ಕೊಡಗು ಜಾನಪದ ಪರಿಕರಗಳ ಸ್ಪರ್ಧೆಯಲ್ಲಿ ದೇವಸ್ತೂರು, ಕಾಲೂರುವಿನ ಕುಕ್ಕೇರ ಬೆಳಕು ಬೊಳ್ಳಮ್ಮ ಪ್ರಥಮ ಬಹುಮಾನ ಗಳಿಸಿದ್ದಾರೆ.
ಪೊನ್ನಂಪೇಟೆ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಪಾರುವಂಗಡ ದಿಲ್ಲನ್ ಚಂಗಪ್ಪ ಅಧ್ಯಕ್ಷತೆಯಲ್ಲಿ, ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅವರಿಂದ ತಾ. ೪ ರಂದು ಉದ್ಘಾಟನೆಗೊಂಡ ಮುಂಗಾರು ಜಾನಪದ ಕಲರವ ‘ಹರಟೆಕಟ್ಟೆ’ ಕಾರ್ಯಕ್ರಮದ ಸಂದರ್ಭ ಬಹುಮಾನ ವಿಜೇತರ ೩ ನಿಮಿಷ ಅವಧಿಯ ವೀಡಿಯೋ ಪ್ರದರ್ಶನ ಏರ್ಪಡಿಸಲಾಗಿತ್ತು. ಶನಿವಾರಸಂತೆ ಜಾನಪದ ಪರಿಷತ್ ಅಧ್ಯಕ್ಷೆ ಸುಜಲಾ ದೇವಿ ದ್ವಿತೀಯ ಹಾಗೂ ಬೀರುಗ (ಕುರ್ಚಿ) ಗ್ರಾಮದ ಎ.ಎಸ್. ಪವಿತ ತೃತೀಯ ಬಹುಮಾನಗಳಿಸಿದ್ದಾರೆ.
ಮುಂಗಾರು ಜಾನಪದ ಕಲರವ ಅಂಗವಾಗಿ ತಾ. ೪ ರಂದು ಆನ್‌ಲೈನ್ ಹರಟೆ ಕಟ್ಟೆ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಜಾನಪದ ಪರಿಷತ್ ಘಟಕಗಳ ಸದಸ್ಯರಿಗಾಗಿ ಚುಟುಕು, ಒಗಟು, ಜಾನಪದ ಗೀತೆ, ಪುಟ್ಟಕತೆ, ಕವನ, ಹಾಸ್ಯ, ಗಾದೆ ಹಾಗೂ ವಾದ್ಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು ಸುಮಾರು ೧೮ ಮಂದಿ ಪಾಲ್ಗೊಂಡಿದ್ದು, ಇವರಲ್ಲಿ ೯ ಮಂದಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವದು ಎಂದು ಪೊನ್ನಂಪೇಟೆ ಜಾನಪದ ಪರಿಷತ್ ಅಧ್ಯಕ್ಷ ಪಾರುವಂಗಡ ದಿಲ್ಲನ್ ಚಂಗಪ್ಪ ತಿಳಿಸಿದ್ದಾರೆ.
ವೀರಾಜಪೇಟೆಯ ಮೋಹನ್ ಟಿ.ಡಿ. (ಜಾನಪದ ಗೀತೆ), ಸೋಮವಾರಪೇಟೆಯ ರುಬೀನಾ ಎಂ.ಎ. (ಚುಟುಕು), ಕಿಗ್ಗಾಲು ಹರೀಶ್ (ಪುಟ್ಟಕತೆ), ಗೋಣಿಕೊಪ್ಪಲು ಎಂ.ಜಿ. ಮೋಹನ್ (ಹಾಸ್ಯ), ಸೋಮವಾರಪೇಟೆ ಶರ್ಮಿಳಾ ರಮೇಶ್ (ಜಾನಪದ ಗೀತೆ), ಕುಶಾಲನಗರ ಸುನೀತಾ (ಚುಟುಕು), ಮಡಿಕೇರಿ ಗೀತಾ ಸಂಪತ್ (ಜಾನಪದ ಗೀತೆ), ಗೋಣಿಕೊಪ್ಪಲು ವಿ.ಟಿ. ಶ್ರೀನಿವಾಸ್ (ವಾದ್ಯ) ಹಾಗೂ ವಡಯನಪುರ ಸುರೇಶ್ (ಜಾನಪದ ಗೀತೆ) ಇವರು ತೀರ್ಪುಗಾರರ ಮೆಚ್ಚುಗೆಯ ಪ್ರೋತ್ಸಾಹ ಧನ ಪಡೆಯಲಿದ್ದಾರೆ. ತೀರ್ಪುಗಾರರಾಗಿ ಡಾ. ಆಶಿಕ್ ಚಂಗಪ್ಪ, ರೀಟಾ ದೇಚಮ್ಮ ಹಾಗೂ ನಿವೃತ್ತ ಪ್ರೊ. ಇಟ್ಟೀರ ಕೆ. ಬಿದ್ದಪ್ಪ ಕಾರ್ಯನಿರ್ವಹಿಸಿದರು.
ನಗದು ಬಹುಮಾನವನ್ನು ಜಿಲ್ಲಾ ಜಾನಪದ ಪರಿಷತ್, ಗೋಣಿಕೊಪ್ಪಲಿನ ಎಂ.ಜಿ. ಮೋಹನ್, ಗೋಣಿಕೊಪ್ಪಲಿನ ಪೊಲೀಸ್ ಹೆಡ್‌ಕಾನ್ಸ್ಟೇಬಲ್ ಧನುಪತಿ ಧನು, ವಿಕಾಶ್, ನಾಗೇಶ್ ಪ್ರಾಯೋಜಿಸಿದ್ದರು.
ಮುಂಗಾರು ಜಾನಪದ ಕಲರವ ೨೦೨೧ ಪೊನ್ನಂಪೇಟೆ ತಾಲೂಕು ನೂತನ ಜಾನಪದ ಪರಿಷತ್‌ನ ಪ್ರಥಮ ಆನ್‌ಲೈನ್ ಕಾರ್ಯಕ್ರಮವಾಗಿದ್ದು ಆಕರ್ಷಕವಾಗಿ ನೆರವೇರಿತು. ಮುಂಗಾರು ಜಾನಪದ ಕಲರವ ವೀರಾಜಪೇಟೆಯ ಕಲಾವಿದ ಬಿ.ಆರ್. ಸತೀಶ್ ಅವರ ಕಾವ್ಯಕುಂಚ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ವೀರಾಜಪೇಟೆಯ ಟಿ.ಡಿ. ಮೋಹನ್ ಅವರ ವಿಘ್ನ ವಿನಾಯಕ ಪ್ರಾರ್ಥನೆ ಸಂದರ್ಭ ಗಣಪತಿಯ ಚಿತ್ರವನ್ನು ಸತೀಶ್ ಅವರು ಬಿಡಿಸುವ ಮೂಲಕ ವಿದ್ಯುಕ್ತವಾಗಿ ಆರಂಭಿಸಲಾಯಿತು. ಜಾನಪದ ವಾದ್ಯ ಸಂಗೀತದೊAದಿಗೆ ಜಿಲ್ಲಾಧ್ಯಕ್ಷ ಅನಂತಶಯನ ಅವರು ಗಾಯನದ ಮೂಲಕ ಉದ್ಘಾಟನೆ ನೆರವೇರಿಸಿದ್ದು ವಿಶೇಷವಾಗಿತ್ತು.
ಪೊನ್ನಂಪೇಟೆ ಘಟಕದ ಪ್ರಧಾನ ಕಾರ್ಯದರ್ಶಿ ಕುಮಾರಿ ಟಿ.ಸಿ. ಗೀತಾನಾಯ್ಡು ಮತ್ತು ಪತ್ರಕರ್ತ ರಫೀಕ್ ತೂಚಮಕೇರಿ ಕಾರ್ಯಕ್ರಮ ನಿರೂಪಣೆ, ಗೋಣಿಕೊಪ್ಪಲಿನ ಪತ್ರಕರ್ತ ಟಿ.ಎಲ್. ಶ್ರೀನಿವಾಸ್ ವಂದಿಸಿದರು.