ಕುಶಾಲನಗರ, ಜು. ೭: ಕೊಡಗು ಜಿಲ್ಲೆಯಲ್ಲಿ ನೂತನ ತಾಲೂಕು ರಚನೆಯಾಗಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾರಣ ಹೊರತು ಬಿಜೆಪಿ ಅಥವಾ ಕಾಂಗ್ರೆಸ್ ಸರ್ಕಾರ ಅಲ್ಲ ಎಂದು ಜೆಡಿಎಸ್ ಕೊಡಗು ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಹೇಳಿದ್ದಾರೆ.
ಅವರು ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕುಶಾಲನಗರದಲ್ಲಿ ತಾಲೂಕು ಉದ್ಘಾಟನಾ ಸಮಾರಂಭ ನಡೆದಿದ್ದು, ಜಿಲ್ಲೆಯಲ್ಲಿ ತಾಲೂಕು ರಚನೆ ತಮ್ಮ ಸಾಧನೆ ಎಂಬAತೆ ಬಿಜೆಪಿ ಬಿಂಬಿಸಿದ್ದು ಸರಿಯಲ್ಲ. ಈ ನಡುವೆ ಸಭೆಯಲ್ಲಿ ಉಂಟಾಗಿರುವ ಗೊಂದಲಕ್ಕೆ ಬಿಜೆಪಿ ಹೊಣೆ ಎಂದರು.
ಸರ್ಕಾರಿ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮ ಎಂಬAತೆ ಬಿಂಬಿಸಿರುವುದು ಖಂಡನೀಯ ಎಂದ ಗಣೇಶ್; ಕಾವೇರಿ ತಾಲೂಕು ಹೋರಾಟ ಸಮಿತಿ ಪ್ರಮುಖರನ್ನು ಪೊಲೀಸ್ ಬಲಪ್ರಯೋಗಿಸಿ ಹೊರ ಹಾಕಿರುವುದು ಸರಿಯಲ್ಲ ಎಂದಿದ್ದಾರೆ. ನೂತನ ತಾಲೂಕುಗಳನ್ನು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿದ್ದು, ಈ ಬಗ್ಗೆ ಜನರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಪ್ಪು ಮಾಹಿತಿ ನೀಡಿ ಗೊಂದಲ ಉಂಟು ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ, ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲಾ ರೀತಿಯ ಪರಿಹಾರ ಕಲ್ಪಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದು ಹೇಳಿದರು.
ನದಿ ನಿರ್ವಹಣೆ ಮಾಡಿದಲ್ಲಿ ಮಾತ್ರ ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಸಾಧ್ಯ ಎಂದು ಅಭಿಪ್ರಾಯಿಸಿದರು.
ಈ ಸಂದರ್ಭ ಮಾತನಾಡಿದ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಇದೀಗ ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರಿಗಳ ಮೂಲಕ ದರ್ಬಾರ್ ನಡೆಸುತ್ತಿದ್ದು ಜನಸಾಮಾನ್ಯರು ಆತಂಕದ ನಡುವೆ ಬದುಕು ಸಾಧಿಸುವಂತಾಗಿದೆ ಎಂದರು. ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಸಿ.ಎಲ್. ವಿಶ್ವ, ತಾಲೂಕು ಉದ್ಘಾಟನಾ ಸಮಾರಂಭದಲ್ಲಿ ನಡೆದ ಘಟನೆಯನ್ನು ಖಂಡಿಸಿ ಕಾವೇರಿ ತಾಲೂಕು ಹೋರಾಟಗಾರರಿಗೆ ಮಾಡಿದ ಅವಮಾನದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ತಾಲೂಕು ಉದ್ಘಾಟನೆಯ ಸಂದರ್ಭ ಪಂಚಾಯಿತಿ ಜನ ಪ್ರತಿನಿಧಿಗಳಿಗೆ ಯಾವುದೇ ರೀತಿಯ ಆಹ್ವಾನ ನೀಡಿಲ್ಲ. ಆಹ್ವಾನ ನೀಡಿ ಸಭೆಗೆ ಬಂದಿರುವವರನ್ನು ಅವಮಾನಿಸಿರುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಖಜಾಂಚಿ ಡೆನ್ನಿ ಬರೋಸ್, ಆರ್ಎಂಸಿ ನಿರ್ದೇಶಕ ರಾಮಚಂದ್ರ ಇದ್ದರು.