ವೀರಾಜಪೇಟೆ, ಜು. ೭: ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ ಮುಂದೆ ಬಂದಿದ್ದಾರೆ. ಕುಟುಂಬದ ನಿರ್ವಹಣೆಯನ್ನು ಸಹ ನಿರ್ಭಯದಿಂದ ಮುನ್ನಡೆಸುತ್ತಿದ್ದಾರೆ ಎಂದು ವೀರಾಜಪೇಟೆ ನಗರ ಠಾಣಾಧಿಕಾರಿ ಜಗದೀಶ್ ಧೂಳ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಐ.ಡಿ.ಬಿ.ಐ ಬ್ಯಾಂಕ್ ಸಹಯೋಗದೊಂದಿಗೆ ಸ್ವಸಹಾಯ ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆ ಮತ್ತು ಪರಿಸರ ದಿನಾಚರಣೆ ಕಾರ್ಯಕ್ರಮವು ನಗರದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಬಾಲಾ ಆಂಜನೇಯ ದೇವಾಲಯದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಠಾಣಾಧಿಕಾರಿ, ಶ್ರೀ ಕ್ಷೇತ್ರದಿಂದ ಅನುಷ್ಠಾನಗೊಳಿಸಿದ ಜನಪರ ಯೋಜನೆಗಳು ರಾಜ್ಯ ವ್ಯಾಪ್ತಿ ವ್ಯಾಪಿಸಿ ನಿರ್ಗತಿಕ ಕುಟುಂಬಗಳ ಆರ್ಥಿಕ ವ್ಯವಸ್ಥೆಗಳನ್ನು ಉನ್ನತೀಕರಣಗೊಳಿಸಿದೆ. ಸಾಲ ಯೋಜನೆಗಳೊಂದಿಗೆ ಕುಟುಂಬ ನಿರ್ವಹಣೆಗಾಗಿ ಪಡೆದಿರುವ ಸಾಲಗಳನ್ನು ಸರಿಯಾದ ಪಥದಲ್ಲಿ ಅನುಷ್ಠಾನ ಮಾಡಿದ್ದಲ್ಲಿ ಮಹಿಳೆಯೂ ಸೇರಿದಂತೆ ಕುಟುಂಬವು ಆರ್ಥಿಕವಾಗಿ ಪ್ರಬಲರಾಗಬಹುದು ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ಮತ್ತು ಮಡಿಕೇರಿ ತಾಲೂಕು ಯೋಜನಾಧಿಕಾರಿ ಪದ್ಮಯ್ಯ ಮಾತನಾಡಿ, ಶ್ರೀ ಕ್ಷೇತ್ರದ ಪೂರ್ವಯೋಜನೆಗಳಾದ ಗ್ರಾಮಾಭಿವೃದ್ಧಿ ಯೋಜನೆ, ಸಮುದಾಯ ಯೋಜನೆಗಳು, ಗ್ರಾಮವಿಕಾಸ ಯೋಜನೆಗಳು, ಶೈಕ್ಷಣಿಕ ಯೋಜನೆಗಳು, ಪ್ರಕೃತಿ ವಿಕೋಪ ನೆರವು ಹೀಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿ ಮಹಿಳೆಯನ್ನು ಸಬಲರನ್ನಾಗಿ ಮಾಡುತ್ತಾ ಬಂದಿದೆ. ಸ್ವಸಹಾಯ ಸಂಘದ ಸದಸ್ಯರು ಪ್ರಥಮ ಹಂತದಿAದ ಉಳಿತಾಯ ಮಾಡಿಕೊಂಡು ಬಂದಿರುವ ಹಣವು ಇಂದು ಲಾಭಾಂಶ ರೂಪದಲ್ಲಿ ಸರ್ವ ಸದಸ್ಯರಿಗೂ ನೀಡಲಾಗುತ್ತಿದೆ. ಕೊಡಗಿನಲ್ಲಿ ಒಟ್ಟು ೬ ಕೋಟಿ ೩೩ ಲಕ್ಷ ರೂಪಾಯಿಗಳನ್ನು ಹಂತಹAತವಾಗಿ ಎಲ್ಲಾ ಸಂಘದ ಸದಸ್ಯರಿಗೂ ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮೀತಾ ಟಿ.ಆರ್., ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀತಾ ಜೂನಾ ಹಾಗೂ ದೇಗುಲದ ಅರ್ಚಕ ಬಾಬಾ ಶಂಕರ್ ಮಾತನಾಡಿದರು. ನಗರದ ವಿವಿಧ ಸ್ವಸಹಾಯ ಸಂಘದ ಸದಸ್ಯರಿಗೆ ಲಾಭಾಂಶದ ಚೆಕ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಪಟ್ಟಡ ರಂಜಿ ಪೂಣಚ್ಚ, ವೀರಾಜಪೇಟೆ ವಲಯ ಮೇಲ್ವಿಚಾರಕಿ ರತ್ನ ಮೈಪಾಲ, ಸಿಬ್ಬಂದಿಗಳಾದ ಮೀನಾಕ್ಷಿ, ಪದ್ಮಲತಾ, ರೇಖಾ, ಮೋಹನ್ ಜೇಮ್ಸ್ ಮತ್ತು ಶೋಭಾ ಹಾಗೂ ನಗರದ ವಿವಿಧ ವಾರ್ಡ್ಗಳ ಸ್ವಸಹಾಯ ಸಂಘದ ಸದಸ್ಯರು ಹಾಜರಿದ್ದರು.