ಗೋಣಿಕೊಪ್ಪ ವರದಿ, ಜು. ೭: ಗೋಣಿಕೊಪ್ಪ ಕೀರೆ ಹೊಳೆ ಹಾಗೂ ಬೈಪಾಸ್ ರಸ್ತೆಯಲ್ಲಿರುವ ಕೈತೋಡು ಸರ್ವೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ವೆಂಕಟಪ್ಪ ಬಡಾವಣೆ ನಿವಾಸಿಗಳು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಈಗಾಗಲೇ ಕಂದಾಯ ಇಲಾಖೆ ಮತ್ತು ಭೂಮಾಪನ ಇಲಾಖೆ ಸರ್ವೆ ನಡೆಸಿ ವೆಂಕಟಪ್ಪ ಬಡಾವಣೆಯ ೮-೧೦ ಕಟ್ಟಡಗಳಿಗೆ ಮಾತ್ರ ಗಡಿ ಗುರುತು ಮಾಡಿದೆ. ದುರುದ್ದೇಶಪೂರ್ವಕವಾಗಿ ಅನ್ಯಾಯ ಮಾಡಿದಂತಾಗಿದೆ ಎಂದು ನಿವಾಸಿ ಎಂ.ಬಿ. ಪೆಮ್ಮಯ್ಯ ಆರೋಪಿಸಿದರು.
ಕೈತೋಡು ಕೈಕೇರಿಯಲ್ಲಿರುವ ಪರಿಮಳ ಮಂಗಳ ವಿಹಾರದಿಂದ ಹರಿದುಬರುತ್ತದೆ. ಆ ಭಾಗದ ಎರಡು ಬದಿಯಿಂದ ಸರ್ವೇ ನಡೆಸಿಕೊಂಡು ಕ್ರಮಕೈಗೊಳ್ಳಬಹುದು. ಆದರೆ, ವೆಂಕಟಪ್ಪ ಬಡಾವಣೆಯಲ್ಲಿ ಮಾತ್ರ ಸರ್ವೆ ನಡೆಸಿ ಗುರುತು ಮಾಡಿರುವುದು ಸರಿಯಾದ ಕ್ರಮವಲ್ಲ. ಬಡಾವಣೆ ಮಾಲೀಕ ನೀಡಿರುವ ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದೇವೆ. ಆದರೆ, ನಮಗೆ ಯಾವ ಮಾಹಿತಿಯೂ ನೀಡದೆ ಗುರುತು ಮಾಡಲಾಗಿದೆ. ಪೊನ್ನಂಪೇಟೆ ರಸ್ತೆ ಸಮೀಪ ತೀರಾ ಒತ್ತುವರಿಯಾಗಿದ್ದರೂ ಅತ್ತ ಕ್ರಮಕೈಗೊಂಡಿಲ್ಲ. ಮುಖ್ಯರಸ್ತೆಗೆ ನಿರ್ಮಿಸಿರುವ ಸೇತುವೆ ಕೂಡ ತೋಡು ಇರುವ ವಿಸ್ತೀರ್ಣಕ್ಕೆ ನಿರ್ಮಿಸಲಾಗಿದೆ. ಇದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ತೋಡಿಗೆ ತಡೆಗೋಡೆ ನಿರ್ಮಿಸಿದೆ. ಆದರೆ, ಒಂದಷ್ಟು ನಿವಾಸಿಗಳು ಮಾತ್ರ ತೊಂದರೆಗೆ ಸಿಲುಕುವಂತಾಗಿದೆ ಎಂದರು.
ಗೋಣಿಕೊಪ್ಪ ಮೂಲಕ ಹರಿಯುವ ಕೀರೆ ಹೊಳೆಯ ಎರಡು ಬದಿಯ ಸರ್ವೆ ನಡೆಸಬೇಕು. ಹೊಳೆ ಮೂಲದಿಂದ ಏಕ ರೀತಿಯ ಸರ್ವೆ, ಅತಿಕ್ರಮಣ ತೆರವು ಕ್ರಮಕೈಗೊಳ್ಳುವುದ ರಿಂದ ಎಲ್ಲರಿಗೂ ನ್ಯಾಯ ಒದಗಿಸಿ ದಂತಾಗುತ್ತದೆ. ಗೊಂದಲ ನಿವಾರಣೆ ಯಾಗುತ್ತದೆ. ಈಗಾಗಲೇ ಶಾಸಕ ಕೆ.ಜಿ. ಬೋಪಯ್ಯ ಅವರ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.
ಬಡಾವಣೆ ನಿವಾಸಿಗಳಾದ ಎಂ.ಕೆ. ಸುರೇಶ್, ರಾಜ, ಟಿ.ಕೆ. ಪುರುಷೋತ್ತಮ, ಎಂ. ಮಹೇಶ್ ಗೋಷ್ಠಿಯಲ್ಲಿದ್ದರು.