ಸಿದ್ದಾಪುರ, ಜು. ೬: ಒಂಟಿ ಸಲಗವೊಂದು ತಡರಾತ್ರಿ ಮನೆಯ ಅಂಗಳಕ್ಕೆ ಬಂದು ಸ್ಕೂಟಿಯೊಂದರ ಮೇಲೆ ದಾಳಿ ನಡೆಸಿ ಹಾನಿಗೊಳಿಸಿದ್ದಲ್ಲದೇ ಯುವತಿಯ ಮೇಲೆ ದಾಳಿ ನಡೆಸಲು ಮುಂದಾಗಿದ್ದು, ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.

ವಾಲ್ನೂರು ತ್ಯಾಗತ್ತೂರು ನಿವಾಸಿಯಾಗಿರುವ ಸುಬ್ರಮಣಿ ಎಂಬವರು ಅವರ ಪುತ್ರಿಯ ಸ್ಕೂಟಿಯನ್ನು ಮನೆಯ ಬಳಿ ರಾತ್ರಿ ನಿಲ್ಲಿಸಿದ್ದರು. ತಡರಾತ್ರಿ ೨ ಗಂಟೆಯ ಸಮಯಕ್ಕೆ ಒಂಟಿ ಸಲಗವೊಂದು ಮನೆಯ ಅಂಗಳಕ್ಕೆ ಬಂದಿದ್ದು, ಮನೆಯ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನು ಎಳೆದು ಹಾಕಿದೆ. ನಂತರ ಕಾಲಿನಿಂದ ಮನಬಂದAತೆ ತುಳಿದು ಹಾನಿಗೊಳಿಸಿ ಜಖಂಗೊಳಿಸಿರುತ್ತದೆ.

ಸ್ಕೂಟಿಯು ಬಿದ್ದ ಶಬ್ಧ ಕೇಳಿ ಸುಬ್ರಮಣಿ ಹಾಗೂ ಅವರ ಮಕ್ಕಳು ರಾತ್ರಿ ಎದ್ದು ನೋಡಿದಾಗ ಸ್ಕೂಟರ್ ಹಾನಿಯಾಗಿದ್ದನ್ನು ಬೆಳಕು ಹಾಯಿಸಿ ನೋಡುವಷ್ಟರಲ್ಲಿ ಮತ್ತೆ ಹಠಾತ್ತನೇ ಒಂಟಿ ಸಲಗ ಸುಬ್ರಮಣಿರವರ ಮನೆಯ ಬಳಿ ಬಂದು ಅವರ ಪುತ್ರಿಯ ಮೇಲೆ ದಾಳಿ ನಡೆಸಲು ಯತ್ನಿಸಿದೆ. ಕೂದಲೆಳೆಯ ಅಂತರದಿAದ ಪುತ್ರಿ ಪಾರಾಗಿದ್ದು, ಕೂಡಲೇ ಸುಬ್ರಮಣಿ ಪುತ್ರಿಯ ಕೈ ಎಳೆದು ಮನೆಯ ಬಾಗಿಲನ್ನು ಭದ್ರಪಡಿಸಿರುವುದಾಗಿ ಸುಬ್ರಮಣಿ ಹೇಳಿದರು. ನಂತರ ಕೋಪಗೊಂಡ ಸಲಗವು ಸುಬ್ರಮಣಿಯವರ ಮನೆಯ ಬಳಿ ಇದ್ದ ಹೂ ಕುಂಡಗಳನ್ನು ತುಳಿದು ಹಾನಿಗೊಳಿಸಿದೆ.

ಈ ಪುಂಡಾನೆಯು ಇತ್ತೀಚೆಗೆ ವಾಲ್ನೂರು ಗ್ರಾಮದ ರಾಮಪ್ಪ ಎಂಬವರ ಮನೆ ಮುಂದಿದ್ದ ಬೈಕ್ ಮೇಲೆ ದಾಳಿ ನಡೆಸಿ ಹಾನಿಗೊಳಿಸಿತ್ತು. ಅಲ್ಲದೇ ಮಾನವನ ಮೇಲೆ ಹಾಗೂ ಜಾನುವಾರುಗಳ ಮೇಲೆ ದಾಳಿ ನಡೆಸಿರುತ್ತದೆಂದು ಗ್ರಾಮಸ್ಥರು ತಿಳಿಸಿದ್ದಾರೆ. ಪುಂಡಾನೆಯನ್ನು ಸೆರೆಹಿಡಿಯ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

-ವಾಸು